ಹುಬ್ಬಳ್ಳಿ: ದಸರಾ ಹಬ್ಬಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಸ್ಥಳಗಳಿಂದ ಆಗಮಿಸುವ ಹಾಗೂ ಹಬ್ಬ ಮುಗಿಸಿಕೊಂಡು ಹಿಂದಿರುಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 21ರಂದು ವಾರಾಂತ್ಯ ಶನಿವಾರ, 22 ರಂದು ಭಾನುವಾರ, 23 ರಂದು ಸೋಮವಾರ ಮಹಾನವಮಿ, ಆಯುಧಪೂಜೆ ಹಾಗೂ 24ರಂದು ಮಂಗಳವಾರ ವಿಜಯದಶಮಿ ಇದೆ. ಹಬ್ಬ ಆಚರಿಸಲು ಅ.20ರಂದು ಶುಕ್ರವಾರ ಮತ್ತು 21 ರಂದು ಶನಿವಾರ ಬೆಂಗಳೂರು, ಮಂಗಳೂರು,ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಂತ ಊರುಗಳಿಗೆ ಬರುವ ನಿರೀಕ್ಷೆ ಇದೆ.
ಹಬ್ಬಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅ.20, 21 ಹಾಗೂ 22ರಂದು ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತದೆ. ಇದಕ್ಕಾಗಿ ಮಲ್ಟಿ ಆ್ಯಕ್ಸಲ್ ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಟಿತ ಐಷಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆಗಳು ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.
ಅದೇ ರೀತಿ ಹಬ್ಬ ಮುಗಿಸಿಕೊಂಡು ಸ್ವಂತ ಊರುಗಳಿಂದ ಹಿಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಅ. 24 ಹಾಗೂ25ರಂದು ಸಂಸ್ಥೆಯ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಿಂದ ಬೆಂಗಳೂರು, ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಜನದಟ್ಟಣೆಗೆ ಅನುಗುಣವಾಗಿ 250 ಕ್ಕೂ ಹೆಚ್ಚು ವಿಶೇಷ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಮುಂಗಡ ಬುಕ್ಕಿಂಗ್; ರಿಯಾಯಿತಿ: ಸಂಸ್ಥೆಯ ವೆಬ್‌ಸೈಟ್ www.ksrtc.in ಅಥವ KSRTC Mobile App, ಅಧಿಕೃತ ಫ್ರಾಂಚೈಸಿಗಳು ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿರುವ ಟಿಕೆಟ್ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಅಥವಾ ಹೆಚ್ಚು ಆಸನಗಳನ್ನು ಒಂದೇ ಟಿಕೆಟ್ ನಲ್ಲಿ ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಬರುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಕೊನೆಯ ಕ್ಷಣದ ರಷ್ ನಿಂದ ತಪ್ಪಿಸಿಕೊಳ್ಳಲು ಕೂಡಲೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವುದು ಸೂಕ್ತ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂಓದಿ: ಮೈಸೂರು ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ