ಹುಬ್ಬಳ್ಳಿ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಆದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಮದುವೆಯಲ್ಲಿ ಕೊರೊನಾ ರೂಲ್ಸ್ ಉಲ್ಲಂಘನೆಯಾಗುತ್ತಿದ್ದರು ಸಹಿತ ಸ್ಥಳೀಯ ಜಿಲ್ಲಾಡಳಿತ ಕಣ್ಣಿದ್ದು ಕುರುಡಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹೌದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸಲು ದಿನಕ್ಕೊಂದು ಕಠಿಣ ಕಾನೂನು ಜಾರಿ ಮಾಡುತ್ತಿದೆ. ಇತ್ತ ಗಣೇಶ ಹಬ್ಬಕ್ಕೂ ಕೊರೊನಾ ನೆಪ ಹೇಳಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದೆ. ಅಲ್ಲದೆ ಸಭೆ, ಸಮಾರಂಭ, ಮದುವೆಗಳಿಗೆ ಇಂತಿಷ್ಟೇ ಜನರು ಸೇರಿಕೊಂಡು ಸರಳವಾಗಿ ಆಚರಣೆ ಅವಕಾಶ ಮಾಡಿಕೊಟ್ಟಿದೆ.
ಆದರೆ ಪ್ರಹ್ಲಾದ್ ಜೋಶಿಯ ಆಡಂಬರದ ಮದುವೆಯಲ್ಲಿ ಗಣ್ಯಾತೀಗಣ್ಯರು ಸೇರಿದಂತೆ ನೂರಾರು ಜನರು ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ವಿವಾಹ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇತ್ತ ಕ್ರಮಕೈಗೊಳ್ಳಬೇಕಾದ ಜಿಲ್ಲಾಡಳಿತ ಮೌನಕ್ಕೆ ಜಾರಿದ್ದು, ಜನರ ಕಂಗಣ್ಣಿಗೆ ಗುರಿಯಾಗಿದೆ.
ಈ ಹಿಂದೆ ಜಿಲ್ಲಾಧಿಕಾರಿಗಳೇ ಅರ್ಬನ್ ಓಯಾಸಿಸ್ ಶಾಪಿಂಗ್ ಮಾಲ್ ನಲ್ಲಿ ದಂಪತಿಗಳಿಬ್ಬರು ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ದರ್ಪ ತೋರಿ, ಫೈನ್ ತುಂಬಿಸಿದ ಮೇಲೆಯೇ ಅವರನ್ನು ಸ್ಥಳದಿಂದ ಕಳಿಸಿದ್ದರು ಎಂದು ಹೇಳಲಾಗ್ತಿದೆ. ಆದರೆ ಇದೀಗ ಕೇಂದ್ರ ಸಚಿವರು ಕೋವಿಡ್ ನಿಯಮವನ್ನೇ ಗಾಳಿಗೆ ತೂರಿದರು ಸಹಿತ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ವಿಪರ್ಯಾಸ ಅನ್ನುವುದು ಜಿಲ್ಲೆಯ ಜನರ ಮಾತಾಗಿದೆ.
ಈ ಬಗ್ಗೆ ಮಾಧ್ಯಮದವರು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಿದರೇ, ಈ ಬಗ್ಗೆ ತುಟಿ ಬಿಚ್ಚದೇ ಇರುವುದು ನೋಡಿದರೇ ಕಾನೂನುಗಳು ಕೇವಲ ಬಡವರಿಗೆ, ಶ್ರೀಮಂತರಿಗೆ ಅನ್ವಯಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.