ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು - ಧಾ ಮಹಾನಗರ ಪಾಲಿಕೆಯ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ತಡೆ ಉಂಟಾಗುತ್ತಲೇ ಇದೆ. ಅಧಿಕಾರಿಗಳ ಎಡವಟ್ಟು ಹಾಗೂ ತರಾತುರಿಯಲ್ಲಿ ನಡೆದ ತಯಾರಿ ಪಾಲಿಕೆ ಚುನಾವಣೆಗೆ ಹಿನ್ನಡೆಯಾಗುತ್ತಿದೆ. ಅಲ್ಲದೇ ಈಗ ಮತ್ತೊಂದು ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ.
ವಾರ್ಡ್ ಮೀಸಲಾತಿ ಮತ್ತು ವಿಂಗಡಿತ ವಾರ್ಡ್‌ಗಳ ಪರಿಮಿತಿಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷ ರಿಟ್ ಅರ್ಜಿ ಸಲ್ಲಿಸಿದೆ. ಹು - ಧಾ ಅವಳಿನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಅರ್ಜಿದಾರರಾಗಿದ್ದು, ಧಾರವಾಡದ ಹೈಕೋರ್ಟ್ ಪೀಠಕ್ಕೆ ಮಂಗಳವಾರ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಅಂಗೀಕಾರವಾಗಿದೆ.
ಹು - ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದೆ 67 ವಾರ್ಡ್ ಗಳಿದ್ದವು. ಅವುಗಳನ್ನು ಮರು ವಿಂಗಡಿಸಿ 82 ವಾರ್ಡ್ಗಳನ್ನಾಗಿ ಮಾಡಲಾಗಿದೆ. ಆದರೆ, ಇದರಲ್ಲಿ ಕೆಲವೊಂದು ವಾರ್ಡ್ ಗಳಲ್ಲಿ ಬೇಕಾಬಿಟ್ಟಿಯಾಗಿ ಮತದಾರರ ಪಟ್ಟಿ ತಯಾರಿಸಲಾಗಿದೆ. ಅಲ್ಲದೇ ಕೆಲವೊಂದು ವಾರ್ಡ್ ಗಳಲ್ಲಿ 15,000 ಮತದಾರರು ಇದ್ದರೆ ಇನ್ನೂ ಕೆಲವು ವಾರ್ಡ್ ಗಳಲ್ಲಿ 4-5 ಸಾವಿರ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಅಲ್ಲದೇ ಹು - ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 18 ಸ್ಥಾನವನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಇಂಥ ಅನ್ಯಾಯಗಳನ್ನು ಸರಿಪಡಿಸಿ ಎಲ್ಲರಿಗೂ ಸಮ್ಮತವಾಗುವ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮತ್ತು ವಾರ್ಡ್ ಪರಿಮಿತಿಗಳನ್ನು ನಿಗದಿಪಡಿಸಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಆದೇಶಿಸಲು ಅರ್ಜಿಯಲ್ಲಿ ಕೋರಿದ್ದಾರೆ.