ಧಾರವಾಡ: ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಇನ್ನೇನಿದ್ರು ಲೋಕಸಭಾ ಚುನಾವಣೆ ಮೇಲೆ ಎಲ್ಲ ಪಕ್ಷಗಳ ಕಣ್ಣುಗಳು ನೆಟ್ಟಿವೆ. ಜೊತೆಗೆ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ಗಾಗಿ ಆಕಾಂಕ್ಷಿತರು ಈಗಲೇ ತಮ್ಮ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಕೂಡ ಆಕಾಂಕ್ಷಿಗಳು ಬಹಿರಂಗವಾಗಿಯೇ ಸ್ಪರ್ಧಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈಗಿನಿಂದಲೇ ಸಂಸತ್ ಚುನಾವಣೆಗೆ ಸಿದ್ಧತೆಗಳು ಶುರುವಾಗಿವೆ. ಹೀಗಾಗಿ ಸಹಜವಾಗಿ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿಯೂ ಸ್ಪರ್ಧೆಗಿಳಿಯಲು ಕಾಂಗ್ರೆಸ್ನಲ್ಲಿ ಸಾಲು ಸಾಲು ಆಕಾಂಕ್ಷಿಗಳ ದಂಡೇ ಇದೆ. ಆದರೆ ಕೇಂದ್ರ ಸಚಿವ ಸಂಪುಟದ ಪ್ರಮುಖ ಸಚಿವ ಸ್ಥಾನದಲ್ಲಿರುವ, ಈ ಕ್ಷೇತ್ರದ ಸಂಸದರೂ ಆಗಿರುವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವ ಕುತೂಹಲವಿದೆ.
ಆಕಾಂಕ್ಷಿತರ ಪಟ್ಟಿಯಲ್ಲಿ ಯಾರೆಲ್ಲಾ?: ಕಾಂಗ್ರೆಸ್ನಲ್ಲಿ ಧಾರವಾಡ ಲೋಕಸಭಾ ಟಿಕೆಟ್ಗಾಗಿ ಆಕಾಂಕ್ಷಿತರಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಆಕಾಂಕ್ಷಿಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಮೋಹನ ಲಿಂಬಿಕಾಯಿ, ಅನಿಲ ಕುಮಾರ ಪಾಟೀಲ್, ರಜತ್ ಉಳ್ಳಾಗಡ್ಡಿ ಸೇರಿದಂತೆ ಹಲವು ನಾಯಕರ ಹೆಸರುಗಳು ಮಂಚೂಣಿಯಲ್ಲಿವೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಈಗಾಗಲೇ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದೆ. ಅಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಧಾರವಾದ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಲಿಂಗಾಯತ ಸಮುದಾಯದ ಹೆಬ್ಬಾಳ್ಕರ್ ಅವರನ್ನು ಉಸ್ತುವಾರಿಯಾಗಿ ಮಾಡುವ ಮೂಲಕ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಲು ಕಾಂಗ್ರೆಸ್ ತಂತ್ರ ಹೆಣೆದಿದೆಯಾ ಎಂಬ ಪ್ರಶ್ನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಹೆಬ್ಬಾಳ್ಕರ್ ಉಸ್ತುವಾರಿಯಾಗುತ್ತಿದ್ದಂತೆ ಜಿಲ್ಲೆಯ ಲಿಂಗಾಯತ ನಾಯಕರು ನಾವೂ ಸಹ ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಂತಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕುತ್ತಿದ್ದಾರೆ. ಆ ಪೈಕಿ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವ ಮೋಹನ ಲಿಂಬಿಕಾಯಿ ಬಹಿರಂಗವಾಗಿಯೇ ಧಾರವಾಡ ಕ್ಷೇತ್ರದ ಆಕಾಂಕ್ಷಿ ಅಂತಾ ಹೇಳಿಕೊಳ್ಳುತ್ತಿದ್ದಾರೆ.
ನಾನು ವಿದ್ಯಾರ್ಥಿ ಕಾಂಗ್ರೆಸ್ನಿಂದ ಬಂದವನು. ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದೆ, ಸದ್ಯ ಕೆಪಿಸಿಸಿ ಸದ್ಯನಾಗಿರುವೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಇದರಿಂದಾಗಿ ಸಹಜವಾಗಿ ನಾನು ಕೂಡ ಎಂಪಿ ಆಕಾಂಕ್ಷಿಯಾಗಿದ್ದೇನೆ. ಈ ಬಾರಿ ನನಗೆ ಹೆಚ್ಚು ಅವಕಾಶ ಇದೆ. ಮೊದಲಿನಿಂದಲೂ ಆಕಾಂಕ್ಷಿಯಾಗಿದ್ದೇನೆ. ಈ ಬಾರಿ ಹೈಕಮಾಂಡ್ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂದು ವಿಜಯ್ ಕುಲಕರ್ಣಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಧಾರವಾಡ ಲೋಕಸಭಾ ಚುನಾವಣೆಯ ವೀಕ್ಷಕರಾದ ಸಚಿವೆ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ಎಲ್ಲ ಪದಾಧಿಕಾರಿಗಳು ಸೇರಿ ಸಭೆ ನಡೆಸಿ ಚುನಾವಣೆಗೆ ಪೂರ್ವಭಾಗಿಯಾಗಿ ಚರ್ಚೆ ಮಾಡಿದ್ದೇವೆ. ಆಕಾಂಕ್ಷಿತರು ಇದ್ದಾರೆ. ಆದ್ರೆ ಹೈಕಮಾಂಡ್ ತೀರ್ಮಾನ ಅಂತಿಮವಾಗುತ್ತದೆ ಎಂದು ಶಾಸಕ ಎನ್.ಹೆಚ್. ಕೋನರೆಡ್ಡಿ ತಿಳಿಸಿದರು.
ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು ಧಾರವಾಡ ಲೋಕಸಭಾ ಕ್ಷೇತ್ರ ಒಳಗೊಂಡಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನು ಕೂಡ ಪ್ರಬಲ ಆಕಾಂಕ್ಷಿ- ಮೋಹನ್ ಲಿಂಬಿಕಾಯಿ