ಹುಬ್ಬಳ್ಳಿ : ಇಲ್ಲಿನ ಉದ್ಯಮಿಯೊಬ್ಬರನ್ನು ಹತ್ಯೆಗೈದ ಪ್ರಕರಣ ನಡೆದು ಒಂದು ವರ್ಷವೇ ಕಳೆದಿದೆ. ಈ ಪ್ರಕರಣದಲ್ಲಿ ಇನ್ನೂ ಕೂಡ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಸೆಪ್ಟಂಬರ್ 21, 2019 ರಂದು ಆಗಷ್ಟೇ ಕೆಲಸ ಮುಗಿಸಿ ಮನೆಗೆ ಬಂದಿದ್ದ ಉದ್ಯಮಿ ಸರ್ವೇಶ್ ಸಿಂಗ್, ತನ್ನ ಮೂರು ವರ್ಷದ ಮಗವಿಗೆ ಚಾಕೋಲೆಟ್ ತರಲು ಮನೆಯಿಂದ ಅಂಗಡಿಗೆ ಹೋಗಿದ್ದಾರೆ. ಆಗ ಆತನ ಮೇಲೆ ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಸುರಿಮಳೆಗೈದು ನಡುರಸ್ತೆಯಲ್ಲಿ ಕೊಂದು ಪರಾರಿಯಾಗಿದ್ದರು.
ಜನನಿಬಿಡ ಪ್ರದೇಶದಲ್ಲಿ ಗುಂಡಿನ ಶಬ್ದ ಕೇಳಿ ಅವಳಿ ನಗರದ ಮಂದಿ ಬೆಚ್ಚಿಬಿದ್ದಿದ್ದರು. ಅಲ್ಲದೆ ಆ ಶೂಟೌಟ್ ಕೇಸ್ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಹಾರ ಮೂಲದ ಟೆಲಿಕಾಂ ಉದ್ಯಮಿಯನ್ನು ಕೊಂದಿದ್ದು ಯಾರು? ಅನ್ನೋ ಅನುಮಾನ ಎಲ್ಲರನ್ನೂ ಕಾಡಿತ್ತು. ಹೀಗಾಗೇ ಅಂದೇ ಡಿಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಈ ಕೇಸ್‌ನ ತನಿಖೆ ಶುರುವಾಗಿ ಒಂದು ವರ್ಷವೇ ಕಳೆದು ಹೋಗಿದೆ. ಇಲ್ಲಿಯವರೆಗೆ ಯಾರೊಬ್ಬರನ್ನೂ ಕೂಡಾ ಅರೆಸ್ಟ್ ಮಾಡೋಕೆ ಪೊಲೀಸರಿಗೆ ಸಾಧ್ಯವಾಗಿಲ್ಲ.
ಅಂದು ಎಸಿಪಿಯಾಗಿದ್ದ ಹೆಚ್.ಕೆ.ಪಠಾಣ್ ನೇತೃತ್ವದಲ್ಲಿ ವಿಶೇಷ ತಂಡ ಕೊಲೆ ಆರೋಪಿಗಳ ಜಾಡು ಹಿಡಿದು ಬಿಹಾರಕ್ಕೆ ಹೋಗಿ ಬಂದಿತ್ತು. ಆದರೆ ಆರೋಪಿಗಳ ಸುಳಿವು ಕೂಡಾ ಸಿಕ್ಕಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್, ಆರೋಪಿಗಳನ್ನು ಅರೆಸ್ಟ್ ಮಾಡೇ ಮಾಡ್ತೀವಿ ಎನ್ನುತ್ತಿದ್ದಾರೆ.