ಹುಬ್ಬಳ್ಳಿ : ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಬೇರೆ ಯಾರೇ ಇರಲಿ, ಕೊಲಂಬೋದ ಕ್ಯಾಸಿನೊ ಪ್ರಚಾರಕ್ಕೆ ಯಾರು ಹೋಗಿದ್ದಾರೋ ಅವರಿಗೆ ಮಾತ್ರ ಗೊತ್ತು. ನಾನು ಮಾತ್ರ ಹೋಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ಶಾಸಕ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಗಿದ್ದು ಗೊತ್ತು. ಆದರೆ, ನಾನು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಆಗ ಮಾಡಿದ ಪ್ರವಾಸದ ವಿಚಾರ ಈಗ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ ಎಂದು ಹೊರಟ್ಟಿ, ರಾಜಕೀಯ ನಾಯಕರ ಕೊಲೊಂಬೋ ಪ್ರವಾಸವನ್ನು ಒಪ್ಪಿಕೊಂಡರು.
ಕುಮಾರಸ್ವಾಮಿ ತಪ್ಪೋ ಸರಿನೋ ನೇರವಾಗಿ ಹೇಳಿಬಿಡ್ತಾರೆ. ಅವರು ಹೇಳುವ ಧೈರ್ಯ ಮಾಡಿದ್ದಾರೆ. ಅದನ್ನು ನಾವು ಮೆಚ್ಚಲೇಬೇಕು. ಗಾಂಜಾ ಡ್ರಗ್ಸ್ ವಿಚಾರದಲ್ಲಿ ಒಮ್ಮೆಗೆ ಎಲ್ಲರ ಹೆಸರು ಬಯಲಿಗೆ ಬಂದು ಬಿಡಲಿ. ಆಗ ಎಲ್ಲವೂ ಸರಿ ಆಗುತ್ತದೆ ಎಂದರು.
ನಮ್ಮನ್ನು ಸಹ ಕ್ಯಾಸಿನೊ ಪ್ರವಾಸಕ್ಕೆ ಕರೆದಿದ್ದರು. ಆದರೆ, ನಾನು ಹೋಗಿರಲಿಲ್ಲ. ಆದ್ರೆ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಏನಾದ್ರೂ ಇದೆನಾ? ಎಂದು ಪ್ರಶ್ನಿಸಿದ ಹೊರಟ್ಟಿ, ರಾಜಕೀಯ ಉದ್ದೇಶವಾಗಿ ಹೋಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.