ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಹಳ ಅಂತರದಿಂದ ಗೆಲ್ಲುತ್ತೇವೆ. ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಗೆ ಬೆಸತ್ತಿದ್ದಾರೆ. ಜನರು ತಮ್ಮ ಆಕ್ರೋಶವನ್ನು ಈಗಾಗಲೇ ಲೋಕಸಭೆ ಮತದಾನದ ಮುಖಾಂತರ ವ್ಯಕ್ತಪಡಿಸಿದ್ದು, ಫಲಿತಾಂಶ ಮಾತ್ರ ಬಾಕಿಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ನವರು ಜೆಡಿಎಸ್‌ಗೆ ಸಪೋರ್ಟ್ ಮಾಡಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕುಂದಗೋಳ ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಉತ್ತರ ಕರ್ನಾಟಕದವರು ಹಣದ ಆಮಿಷಕ್ಕೆ ಒಳಗಾಗಿ ನನಗೆ ಮತಹಾಕಿಲ್ಲ ಎಂದರು.
ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಕಚ್ಚಾಟ ಉಲ್ಭಣಗೊಳ್ಳುತ್ತೆ. ಅದರ ಫಲಿತಾಂಶ ಏನು ಬೇಕಾದರೂ ಆಗಬಹುದು.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಿಗೆ ಜನರು ಬೆಂಬಲ ಸೂಚಿಸುತ್ತಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರ ಬಗೆಗಿನ ವಿಶ್ವಾಸ ಹೆಚ್ಚಾಗುತ್ತಿದೆ.ಉಪ ಚುನಾವಣೆಯಲ್ಲಿ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.