ಹುಬ್ಬಳ್ಳಿ: ಅಂಗನವಾಡಿ ಕೇಂದ್ರದ ಸಿಬ್ಬಂದಿಯ ಯಡವಟ್ಟಿನಿಂದ ಎರಡು ವರ್ಷದ ಮಗು ಸಾವನ್ನಪ್ಪಿರುವ ಆರೋಪ ಜಿಲ್ಲೆಯ ಉಣಕಲ್‌ನಲ್ಲಿ ಕೇಳಿಬಂದಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬವರ ಮೊಮ್ಮಗ ಧೃವ (2) ಸಾವನ್ನಪ್ಪಿದ ಮಗು. ಲಸಿಕೆಯ ಓವರ್ ಡೋಸ್ನಿಂದಾಗಿ ಮಗು ಸಾವನ್ನಪ್ಪಿದೆ ಎಂದು ಮಗುವಿನ ಅಜ್ಜ ಜಟ್ಟಪ್ಪ ಆರೋಪಿಸಿದ್ದಾರೆ.
ಅಜ್ಜ ಹಾಗೂ ಅಜ್ಜಿಯ ಜೊತೆ ಧೃವ ವಾಸವಾಗಿದ್ದ. ಪ್ರತಿ ಗುರುವಾರ ಮಕ್ಕಳಿಗೆ ಆರೋಗ್ಯ ಇಲಾಖೆ ಲಸಿಕೆ ಹಾಕುತ್ತದೆ. ಅದರಂತೆ ಬುಧವಾರ ಮಧ್ಯಾಹ್ನ ತಾಜನಗರದ ಅಂಗನವಾಡಿಯೊಂದರಲ್ಲಿ ಮಗುವಿನ ಅಜ್ಜಿ ಮಲ್ಲಮ್ಮ ಲಸಿಕೆ ಹಾಕಿಸಿದ್ದರು. ಒಂದೇ ದಿನ ಐದು ಲಸಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಲಸಿಕೆ ಪಡೆದ ಬಳಿಕ ಮಗು ಆರಾಮಾಗಿತ್ತು. ಆದರೆ ಇಂದು ಮಧ್ಯಾಹ್ನ ಏಕಾಏಕಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಜ್ಜಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿದೆ. ಇದಕ್ಕೆಲ್ಲ ಕಾರಣ ಲಸಿಕೆ ಓವರ್ ಡೋಸ್ ಎಂದು ಮೃತ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂಗನವಾಡಿ ಸಿಬ್ಬಂದಿ ಮನೆಗೆ ಬಂದು ಲಸಿಕೆ ನೀಡಬೇಕು ಎಂದು ಹೇಳಿದ್ದರು. ಈ ಸಂಬಂಧ ಮಗುವಿಗೆ ಲಸಿಕೆ ಹಾಕಿಸಲು ಅಜ್ಜಿ ಅಂಗನವಾಡಿಗೆ ಹೋಗಿದ್ದರು. ಈ ಸಮಯದಲ್ಲಿ ಮಗುವಿಗೆ ಸ್ವಲ್ಪ ಜ್ವರ ಇತ್ತು. ಮಗುವಿಗೆ ಅಂಗನವಾಡಿಯಲ್ಲಿ ಡಿಪಿಟಿ ವರ್ಧಕ 1 ,ಒಪಿವಿ ವರ್ಧಕ ,MR -2 ,ಜೆಇ -2 ಹಾಗೂ ವಿಟಮಿನ್ A -2 ಲಸಿಕೆ ನೀಡಲಾಗಿತ್ತು. ಅದೇ ಕಾರಣಕ್ಕೆ ಒಮ್ಮೆಲೆ ನೀಡಿದ ಲಸಿಕೆ ಓವರ್ ಡೋಸ್ ಆಗಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಚೌಹಾಣ್, ಮಗುವಿನ ಸಾವಿನ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಂದು ಮಧ್ಯಾಹ್ನ ಮಗುವಿಗೆ ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿತ್ತು. ಕೂಡಲೇ ಮಗುವಿನ ಅಜ್ಜಿ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ಆಕ್ಸಿಜನ್ ಇಲ್ಲ ಅನ್ನೋ ಕಾರಣಕ್ಕೆ ಮಗುವನ್ನು ಕಿಮ್ಸ್‌ಗೆ ಕರೆತಂದ್ದಾರೆ. ಆದರೆ ಕಿಮ್ಸ್‌ಗೆ ತಲುಪುವ ಮುನ್ನವೇ ಮಗು ಸಾವನ್ನಪ್ಪಿತ್ತು.
ಅಕಸ್ಮಾತ್ ಲಸಿಕೆಯಿಂದ ರಿಯಾಕ್ಷನ್ ಆಗಿದ್ರೆ ಮಗುವಿಗೆ ನಿನ್ನೆಯೇ ಏನಾದರೂ ಆಗಬೇಕಿತ್ತು. ಆದರೆ ಮಗು ನಿನ್ನೆ ಹುಷಾರಾಗಿತ್ತು. ಮಧ್ಯಾಹ್ನ ಊಟದ ಬಳಿಕ ಮಗು ಬಿದ್ದಿದ್ದ ಕಾರಣಕ್ಕೆ ಮಗು ಸಾವನ್ನಪ್ಪಿರುವ ಅನುಮಾನ ಇದೆ. ಮಗುವಿನ ಸಾವಿನ ಬಗ್ಗೆ ಸದ್ಯಕ್ಕೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮಗುವಿನ ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಳ್ಳರ ಕಾಟಕ್ಕೆ ಬೆಚ್ಚಿದ್ದ ಬೆಳಗಾವಿ: ದೊಣ್ಣೆ ಹಿಡಿದು ರಾತ್ರಿ ಗಸ್ತು ತಿರುಗುತ್ತಿರುವ ಜನ