ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜ್ವಲಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಸಾಕಷ್ಟು ಹೋರಾಟಗಳು ನಡೆದಿದ್ದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಈ ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ನಿರ್ಧಾರಕ್ಕೆ ಬಂದಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಜನರಿಂದ ವ್ಯಕ್ತವಾಗುತ್ತಿದ್ದು ಇಲ್ಲಿಯ ಜನತೆಗೆ ಹದಿನೈದು ದಿನಕ್ಕೊಮ್ಮೆ ಆದರೂ ಕೂಡ ನೀರು ಸಿಗುತ್ತಿಲ್ಲ. ಹೌದು.. ಬೇಸಿಗೆಯ ಮುನ್ನವೇ ಅವಳಿನಗರದ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದು, ಸೂಕ್ತ ಪರಿಹಾರದ ದಾರಿ ಕಾಣದೇ ಕಂಗಾಲಾಗಿದ್ದಾರೆ. ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಜನರು ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸಭೆ ನಡೆಸಿ ಅದೆಷ್ಟೋ ಸೂಚನೆ ನೀಡಿದರೂ ಎಲ್ ಆ್ಯಂಡ್ ಟಿ ಗೆ ನೀರಿನ ಸರಬರಾಜು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಎಲ್ ಆ್ಯಂಡ್ ಟಿ ವೈಫಲ್ಯದ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಜಲಮಂಡಳಿಯ ಕಾರ್ಯವನ್ನು ಮುನ್ನೆಡೆಸುವಂತೆ ಸೂಚನೆ ನೀಡಲು ಆಗ್ರಹಿಸಿದ್ದಾರೆ.
ಎಲ್ ಆ್ಯಂಡ್ ಟಿ ಮಾತಿನಂತೆ ನಡೆದುಕೊಂಡಿಲ್ಲ: ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಎಲ್ ಆ್ಯಂಡ್ ಟಿ ಕ್ರೆಡಿಬಲಿಟಿ ಇರುವ ಕಂಪನಿ ಎಂದು ಕುಡಿಯು ನೀರಿನ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದೆವು. ಹೆಸರಿಗೆ ತಕ್ಕಂತೆ ಅವರು ನಡೆದುಕೊಂಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಜನರಿಗೆ ಅನಾನುಕೂಲತೆ ಆಗುತ್ತಿದೆ. ಬುದ್ದಿವಂತಿಕೆ ಇಲ್ಲದ ಕಾರಣ ಅವಾಂತರ ಸೃಷ್ಟಿಸಿದ್ದಾರೆ. ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ್ದೆ. ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ 150 ಹಂಗಾಮಿ ನೌಕರರನ್ನು ಖಾಯಂ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹಂಗಾಮಿ ನೌಕರರಿಗೆ ಎಂಟು ತಿಂಗಳಿಂದ ವೇತನ ಮಾಡಿಲ್ಲ, ಕೂಡಲೇ ಮಾಡಬೇಕು. ನಗರಾಭಿವೃದ್ಧಿ ಸಚಿವರಿಗೆ ಕೂಡಲೇ ಹುಬ್ಬಳ್ಳಿಗೆ ಬಂದು ಮೀಟಿಂಗ್ ಮಾಡಲು ಹೇಳಿದ್ದೇನೆ. ವಾರ್ನಿಂಗ್ ಮಾಡಿ ಸುಧಾರಣೆ ಮಾಡಲು ಸೂಚಿಸಬೇಕು, ಇಲ್ಲವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಇನ್ನೂ ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಗದೀಶ ಶೆಟ್ಟರು ಅಸಮಾಧಾನ ವ್ಯಕ್ತಪಡಿಸಿದ್ದು, ನೀರು ಪೂರೈಕೆ ಯೋಜನೆ ಜಲಮಂಡಳಿಗೆ ವಹಿಸಿ, ಎಲ್ & ಟಿ ಕಂಪನಿ ಅನುಷ್ಠಾನ ಹಾಗೂ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಗಮನಾರ್ಹವಾಗಿದೆ. 8 ತಿಂಗಳಿನಿಂದ ಎಲ್ ಆ್ಯಂಡ್ ಟಿ ಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. ನೀರು ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಎಲ್ ಆ್ಯಂಡ್ ಟಿ ಜೊತೆ ಮಾಡಿಕೊಂಡ ಒಪ್ಪಂದ ಹಿಂಪಡೆಯಿರಿ ಎಂದು ಈ ಕುರಿತು ಮುಖ್ಯಮಂತ್ರಿಗೆ ಮತ್ತು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಜಗದೀಶ್ ಶೆಟ್ಟರ್ ಉಸ್ತುವಾರಿ ಸಚಿವರಾಗಿದ್ದಾಗ ನಡೆದಿದ್ದ ಒಪ್ಪಂದಕ್ಕೆ ಈಗ ಶೆಟ್ಟರ್ ಅಸಮಾಧಾನಗೊಂಡಿದ್ದಾರೆ. ಎಲ್ ಆ್ಯಂಡ್ ಟಿ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಎಲ್ ಆ್ಯಂಡ್ ಟಿ ಪರ ಮಾತಾಡಿದ್ದ ಶೆಟ್ಟರು, ಈಗ ಎಲ್ ಆ್ಯಂಡ್ ಟಿ ವಿಫಲವಾಗಿದೆ ಎಂದು ಆರೋಪಿಸಿ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ಗೆ ಪತ್ರ ಬರೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಹದಾಯಿ ವಿಚಾರವಾಗಿ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್ಗೆ ಇಲ್ಲ: ಶಂಕರ ಪಾಟೀಲ್ ಮುನೇನಕೊಪ್ಪ