ಹುಬ್ಬಳ್ಳಿ: ಬಿಜೆಪಿಯವರು 40 ಪರ್ಸೆಂಟ್ ಭ್ರಷ್ಟ ಹಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬಹುದು ಎಂದು ಕೊಂಡಿದ್ದಾರೆ. ಆದರೆ ಬಿಜೆಪಿಯಿಂದ ಕರ್ನಾಟಕ ಸರ್ಕಾರ ಅಭದ್ರಗೊಳಿಸುವುದು ಅಸಾಧ್ಯದ ಮಾತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ದಿಗ್ವಿಜಯ ಸಿಂಗ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಬಿಜೆಪಿ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದೆ. ಅಹಂಕಾರದಿಂದ ಅವರು ಮಾತನಾಡುತ್ತಿದ್ದಾರೆ. ತಮ್ಮ ಬಳಿ ಜಮಾ ಇರುವ 40 ಪರ್ಸೆಂಟ್ ಹಣವನ್ನು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಳಸಬೇಕೆಂದುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ' ಎಂದರು.
ಭಾರತ ಹಿಂದೂ ರಾಷ್ಟ್ರ ಎಂಬ ಕಮಲಾನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿಗ್ವಿಜಯ ಸಿಂಗ್ 'ಕಮಲಾನಾಥ್ ಆ ರೀತಿ ಹೇಳಿಲ್ಲ. ಭಾರತೀಯ ಸಂವಿಧಾನದಲ್ಲಿ ಎಲ್ಲ ವ್ಯಕ್ತಿಗಳಿಗೂ ತನ್ನ ಧರ್ಮ ಪಾಲನೆಗೆ ಅವಕಾಶವಿದೆ. ಭಾರತದಲ್ಲಿ ಸಂವಿಧಾನವೇ ಸರ್ವಸ್ವ ಆಗಿದೆ. ಹಿಂದೂಗಳ ಜನಸಂಖ್ಯೆ ಇಲ್ಲಿ ಹೆಚ್ಚಿದೆ. ನೇಪಾಳದ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಹಿಂದುಗಳೇ ಇದ್ದಾರೆ. ಆದರೆ ನೇಪಾಳ ಹಿಂದೂ ರಾಷ್ಟ್ರ ಅಂತ ಘೋಷಿಸಿಕೊಂಡಿಲ್ಲ. ಜಾತ್ಯತೀತ ಸಂವಿಧಾನ ಅಳವಡಿಸಲಾಗಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಅಂತಾ ಘೋಷಿಸಿಕೊಂಡ ನಂತರ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ . ಅಲ್ಲಿ ಮುಸಲ್ಮಾನರೇ ಮುಸಲ್ಮಾನರನ್ನು ಹೊಡೆದು ಹಾಕಿದ್ದಾರೆ. ಇಲ್ಲಿ ಹಿಂದೂ ರಾಷ್ಟ್ರದ ಪ್ರಶ್ನೆಯಿಲ್ಲ ದೇಶ ಎಲ್ಲರಿಗೂ ಸೇರಿದ್ದಾಗಿದೆ' ಎಂದರು.
ಎಲ್ಲ ಧರ್ಮಿಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಸಾಫ್ಟ್ ಅಥವಾ ಹಾರ್ಡ್ ಅನ್ನೋ ಪ್ರಶ್ನೆ ಇಲ್ಲ. ಹಿಂದುತ್ವದ ಪರಿಕಲ್ಪನೆ ತಂದವರು ಸಾವರ್ಕರ್. ಹಿಂದುತ್ವಕ್ಕೂ ಹಿಂದೂ ಧರ್ಮ ಸನಾತನ ಧರ್ಮಕ್ಕೂ ಸಂಬಂಧವಿಲ್ಲ ಎಂದು ಅವರೇ ಹೇಳಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಹಿಂದುತ್ವದ ಮಾತುಗಳನ್ನು ಆಡೋದು ಸರಿಯಲ್ಲ ಎಂದರು. ಕರ್ನಾಟಕ ಸರ್ಕಾರದಲ್ಲಿ 50 ಪರ್ಸೆಂಟ್ ಭಷ್ಟಾಚಾರ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಉತ್ತರ ಕೊಡುತ್ತಾರೆ. ನನಗೆ ತಿಳಿದ ಮಟ್ಟಿಗೆ ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ ಶೇ.50ರಷ್ಟು ದಾಟಿದೆ ಎಂದರು.
ಮಣಿಪುರದಲ್ಲಿ ಗಲಭೆ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತನ್ನ ಸ್ವಾರ್ಥಕ್ಕೆ ಬಿಜೆಪಿ ಈ ರೀತಿಯ ಪಿತೂರಿ ಮಾಡಿದೆ. ಮಣಿಪುರದ ತಂತ್ರವನ್ನೇ ಈಗ ಜಮ್ಮು - ಕಾಶ್ಮೀರದಲ್ಲಿ ಪ್ರಯೋಗ ಮಾಡಲು ಹೊರಟಿದೆ. ಇದನ್ನು ಅರ್ಥ ಮಾಡಿಕೊಳ್ಳೋದು ಸದ್ಯದ ಅವಶ್ಯವಾಗಿದೆ ಎಂದರು.
ಕಾಂಗ್ರೆಸ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ: ಕಳೆದ ಎರಡು ವರ್ಷದಿಂದ ಜಗದೀಶ್ ಶೆಟ್ಟರ್ ಯಾವ ಅಧಿಕಾರದಲ್ಲಿದ್ದರು? ಸುಮ್ನೆ ಟೀಕೆ ಮಾಡಬೇಕು ಅಂತಾ ಮಾಡಬಾರದು. ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಆ ಕ್ಯಾಬಿನೆಟ್ನಲ್ಲಿ ನಾನು ಮಿನಿಸ್ಟರ್ ಆಗಿ ಇರೋದಿಲ್ಲ ಎಂದಿದ್ದೆ. ಹಾಗೇ ನಡೆದುಕೊಂಡಿದ್ದೇನೆ ಎಂದು ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ಆರ್.ಅಶೋಶ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಆವಾಗಲೇ ಸೋಲ್ತೀವಿ ಅಂತಾ ಖಾತ್ರಿಯಾಗಿತ್ತು. ಕಾಂಗ್ರೆಸ್ ಗೆಲ್ಲುತ್ತೆ ಅಂತ ಮೊದಲೇ ಖಾತ್ರಿ ಆಗಿತ್ತು. ಇಷ್ಟು ಮುಖಭಂಗವಾದರೂ ಈ ಬಡಪಾಯಿಗೆ ಯಾಕೆ ಬೆನ್ನು ಬಿದ್ದಿದ್ದೀರಿ?. ಶೆಟ್ಟರ್ ಅವರನ್ನು ಬಿಡ್ತಾನೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ನಗೆ ಚಟಾಕಿ ಹಾರಿಸಿದರು.
ಉತ್ತರ ಕರ್ನಾಟಕದಲ್ಲಿ 20 ರಿಂದ 30 ಸೀಟ್ ಹೋದ್ವಲ್ಲ ಅಂತ ಯೋಚನೆ ಮಾಡ್ತಾರೆ. ಶೆಟ್ಟರ್ ಮನೆಲಿ ಸುಮ್ನೆ ಕೂರ್ತಾರೆ, ಪಕ್ಷ ಬಿಡೋದಿಲ್ಲ ಅಂತ ತಿಳಿದಿದ್ರು. ಹೋದ ಮೇಲೆ ಏನು? ಪರಿಣಾಮ ಆಗಿದೆ ಅಂತ ಈಗ ಅವರಿಗೆ ಗೊತ್ತಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಅವರಿಗೆ ಏನು ನೈತಿಕತೆ ಇದೆ. ಶೇ 40ರಷ್ಟು ಕಮಿಷನ್ಗೆ ಅವರು ಉತ್ತರ ಕೊಡಲಿಲ್ಲ. ಇದರಿಂದಾಗಿ ಜನಮನ್ನಣೆ ಹೋಯ್ತು. 120 ಇದ್ದದ್ದು 60 ಸೀಟ್ಗಳಿಗೆ ಇಳಿಯುತ್ತೆ ಅಂದ್ರೆ ಅದು ಏನು ? ಭ್ರಷ್ಟಾಚಾರ ಬಗ್ಗೆ ಜನರ ಆಕ್ರೋಶ ಅದು ಎಂದರು.
ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಶಾಸಕರು ವಸೂಲಿಗೆ ಇಳಿದಿದ್ದಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದೆಲ್ಲ ನಿಜವೇನು?. ಸಿಟಿ ರವಿ ಏನು ಸತ್ಯ ಹರಿಶ್ಚಂದ್ರರಾ ? ಅವರು ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ರು. ಕಾಂಗ್ರೆಸ್ ಸರ್ಕಾರ 5 ವರ್ಷ ಮುಂದುವರೆಯುತ್ತದೆ. ಅಲುಗಾಡಿಸಲು ಯಾರಿಂದಲೂ ಸಾಧ್ಯ ಇಲ್ಲ. ಆಪರೇಷನ್ ಕಮಲದ ಬಗ್ಗೆ ಬಿಜೆಪಿಯವರು ಸ್ಪಷ್ಟಪಡಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಹೋರಾಟದ ರಾಜಕಾರಣಿಯಲ್ಲ, ಊಟದ ಸಮಯಕ್ಕೆ ಬಂದು ಊಟ ಮಾಡಿ ಹೋಗುವ ರಾಜಕಾರಣಿ: ಅಶೋಕ್ ವ್ಯಂಗ್ಯ