ಧಾರವಾಡ: ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಬಿ. ಚೆಟ್ಟಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ. ಕೂಡಲೇ ಅವರನ್ನು ಕೈಬಿಟ್ಟು ಯೋಗ್ಯ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಟಾಪ್ 10 ಕೃಷಿ ವಿವಿಗಳಲ್ಲಿ ಧಾರವಾಡ ಕೃವಿವಿ ಒಂದಾಗಿದೆ. ಧಾರವಾಡ ಕೃವಿವಿ ಕುಲಪತಿಗಳಾಗಿ ಅವರು ಮುಂದುವರೆಯುವುದು ತಲೆತಗ್ಗಿಸುವ ಸಂಗತಿ. ಹೀಗಾಗಿ ಅವರನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಈ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
1989 ಪರಿಶಿಷ್ಟ ಜಾತಿ (ಎಸ್‌ಸಿ)ಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆಯನ್ನು ಸಂದರ್ಶನ ಇಲ್ಲದೇ ಪಡೆದಿದ್ದು, ಇದು ಎಸ್. ಸಿ. ಬ್ಯಾಕ್ ಲಾಗ್ ಆಗಿತ್ತು. ಈ ಅಪರಾಧ ಹಿನ್ನೆಲೆಯಲ್ಲಿ ಅಂದಿನ ಕುಲಪತಿ ಡಾ.ಜೆ.ವಿ ಗೌಡರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ. ಕನಿಷ್ಠ ಐದು ವರ್ಷದ ಅನುಭವ ಇಲ್ಲದೇ ಸಹ ಪ್ರಾಧ್ಯಾಪಕ ಹುದ್ದೆ ಪಡೆದಿದ್ದು ಅಪರಾಧವೆಂದು ರಾಜ್ಯಪಾಲರು ನೇಮಿಸಿದ್ದ ಕೆ.ಪಿ. ಸುರೇಂದ್ರನಾಥ ಹಾಗೂ ಗಣೇಶ ರಾವ್ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೊರವರ ಆರೋಪಿಸಿದರು.
ಇದಲ್ಲದೇ ಕುಲಸಚಿವರಾಗಿದ್ದಾಗ 409 ಜನರ ಡಿ ಗ್ರೂಪ್ ನೇಮಕಾತಿ ವೇಳೆ ಸರ್ಕಾರದ ಆದೇಶ ಧಿಕ್ಕರಿಸಿ ಪೂರ್ವಾನ್ವಯವಾಗುವಂತೆ ಖಾಯಂ ಮಾಡಿ, ಕಾಲ್ಪನಿಕ ವೇತನ ನಿಗದಿಪಡಿಸಿ, ಅಕ್ರಮವೆಸಗಿದ ಆರೋಪದ ಮೇಲೆ ಲೆಕ್ಕಪತ್ರ ನಿರ್ವಹಣೆ ವಿಭಾಗ ಲೋಪದೋಷಗಳನ್ನು ಪಟ್ಟಿ ಮಾಡಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೃಷಿ ಇಲಾಖೆ ಕಾರ್ಯದರ್ಶಿ 5.85 ಕೋಟಿ ರೂ. ಮರು ವಸೂಲಾತಿ ಮಾಡಲು 2018 ಜೂನ್ 7 ರಂದು ಸೂಚಿಸಿದೆ. ಇದುವರೆಗೂ ವಸೂಲಿ ಆಗಿಲ್ಲವೆಂದು ದೂರಿದರು.
ಈ ಕುರಿತು ರಾಜ್ಯಪಾಲರಿಗೆ ಲಿಖಿತ ದೂರು ನೀಡಲಾಗಿದೆ. ಸಮಗ್ರ ತನಿಖೆ ನಡೆಸಿ ಅವರನ್ನು ತಕ್ಷಣವೇ ಹುದ್ದೆಯಿಂದ ಕೆಳಗಿಳಿಸಬೇಕು. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇವರನ್ನು ಮೊದಲು ವಿಸಿ ಹುದ್ದೆಯಿಂದ ಕೆಳಗಿಳಿಸಿ ಯೋಗ್ಯವಾದ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಕೊರವರ ಆಗ್ರಹಿಸಿದ್ದಾರೆ.