ಹುಬ್ಬಳ್ಳಿ: ಶಾಸಕ ಅರವಿಂದ್ ಬೆಲ್ಲದ್ ಮಾಲೀಕತ್ವದ ಕಂಪನಿ ಶೋ ರೂಂ ಗ್ರಾಹಕರ ಸೇವಾ ಕೇಂದ್ರದಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ 31 ಲಕ್ಷ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕಿನ ಬಾಲೇಶ್ ಘಾಟಗೆ ಎಂಬುವವನು ಅರವಿಂದ್ ಬೆಲ್ಲದ್ ಕಂಪನಿಗೆ ₹31,45,909 ವಂಚನೆ ಮಾಡಿದ್ದಾನೆ ಎಂದು ದೂರು ದಾಖಲಾಗಿದ್ದು, ವಾಹನಗಳ ನವೀಕರಣ, ಗ್ರಾಹಕರಿಂದ ವಸೂಲಿ ಮಾಡಿದ ಹಣ, ಚೆಕ್ ಮೂಲಕ ನಡೆಸಿದ ಹಣವನ್ನು ಆರೋಪಿ ತನ್ನ ಸ್ವಂತಕ್ಕೆ ಬಳಕೆ ಮಾಡಿಕೊಂಡು ಕಂಪನಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2018ರ ಆಗಸ್ಟ್ 1ರಂದು ಕಂಪನಿಗೆ ಲೆಕ್ಕಾಧಿಕಾರಿಯಾಗಿ ನೇಮಕವಾಗಿದ್ದ ಬಾಲೇಶ್, ಕಂಪನಿಯ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ. 2018ರ ಆಗಸ್ಟ್ 30ರಿಂದ 2019ರ ಜುಲೈ 30ರ ನಡುವೆ ಕಂಪನಿಯ ಕ್ಷೇತ್ರ ಕಾರ್ಯನಿರ್ವಾಹಕರು ತಂದುಕೊಟ್ಟಿದ್ದ ₹20,11,597 ಕಂಪನಿ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದನು. ಅಲ್ಲದೇ 2019ರ ಜುಲೈ 12ರಂದು ಕಂಪನಿಯ ಚಾಲ್ತಿ ಖಾತೆಯಿಂದ ₹2.30 ಲಕ್ಷವನ್ನು ಹೊಸೂರಿನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ₹9,04,312 ಬ್ಯಾಂಕಿನಿಂದ ತೆಗೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದನು. ವಂಚನೆ ಬೆಳಕಿಗೆ ಬಂದ ನಂತರ ಎಲ್ಲಾ ಹಣ ತುಂಬುವುದಾಗಿ ಬಾಲೇಶ್ ಹೇಳಿದ್ದ. ಹಣ ತುಂಬದ ಹಿನ್ನೆಲೆಯಲ್ಲಿ ಕಂಪನಿ ವ್ಯವಸ್ಥಾಪಕ ಉಳವಪ್ಪ ರಡ್ಡೇರ ಪ್ರಕರಣ ದಾಖಲಿಸಿದ್ದಾರೆ.