ಧಾರವಾಡ: ಒಂಭತ್ತು ತಿಂಗಳು ಹೆತ್ತು, ಹೊತ್ತು ಸಾಕಿದ ತಾಯಿಯನ್ನೇ ಮಗ ಮನೆಯಿಂದ ಹೊರಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಧಾರವಾಡ ತಾಲೂಕಿನ ವೀರಾಪುರ ಗ್ರಾಮದ ಈರವ್ವ ಹುಂಡೇಕಾರ್ ಎಂಬ ಅಜ್ಜಿ ತನ್ನ ಕಿರಿಯ ಮಗನ ಕಾಟಕ್ಕೆ ಬೇಸತ್ತು ಮನೆ ಬಿಟ್ಟು ಊರಿನಿಂದ ಊರಿಗೆ ತಿರುಗುವಂತಾಗಿದೆ ಎನ್ನಲಾಗಿದೆ.
ಮಡಿವಾಳಿ ಹುಂಡೇಕರ್ ಎಂಬ ಕಿರಿಯ ಮಗ ಮನೆ ಮತ್ತು ಊರು ಬಿಟ್ಟು ತನ್ನನ್ನು ಹೊರಹಾಕಿದ್ದಾನೆ ಎಂದು ತಾಯಿ ಈರವ್ವ ಹುಂಡೇಕಾರ ಆರೋಪಿಸಿದ್ದಾಳೆ. ತನ್ನ ತಾಯಿಗೆ ಆಶ್ರಯ ನೀಡಿದ ತನ್ನ ಸಹೋದರನ ಮೇಲೆಯೂ ದೌರ್ಜನ್ಯ ನಡೆಸುತ್ತಿದ್ದಾನೆ. ಇದರಿಂದಾಗಿ ಇಳಿ ವಯಸ್ಸಿನ ಅಜ್ಜಿಯೊಬ್ಬರು ಆಶ್ರಯಕ್ಕಾಗಿ ಕಂಡ ಕಂಡವರ ಮನೆಯ ಬಾಗಿಲು ತಟ್ಟುತ್ತಿದ್ದಾರೆ. 80ರ ಇಳಿ ವಯಸ್ಸಿನ ತಾಯಿಯನ್ನ ಸಾಕಿ, ಸಲುಹಬೇಕಿದ್ದ ಮಗನೇ ಹೊರಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಕಾರಣ ತಾಯಿ ಈರವ್ವ ಹುಂಡೇಕಾರ ಅವರ ಹೆಸರಲ್ಲಿರುವ ಆಸ್ತಿ ಎನ್ನಲಾಗಿದೆ.
ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಜೊತೆಗೆ 12 ಎಕರೆ ಕೃಷಿ ಜಮೀನು ಮತ್ತು ಒಂದು ಮನೆ ಕೂಡ ಇದೆ. ಇದರಲ್ಲಿ ಇಬ್ಬರಿಗೂ ಆರು, ಆರು ಎಕರೆ ನೀಡಿದ್ದ ಅಜ್ಜಿ, ಕಿರಿಯ ಮಗ ಮಡಿವಾಳಪ್ಪ ಹುಂಡೇಕಾರ್ ಜೊತೆ ಇದ್ದಳು. ಆದರೆ ಮಡಿವಾಳಪ್ಪನಿಗೆ ಇಬ್ಬರು ಪತ್ನಿಯರು ಇರುವುದರಿಂದ ಆಸ್ತಿ ಸಂಬಂಧ ಅಜ್ಜಿಗೆ ಕಿರಿಕಿರಿ ಶುರುವಾಯಿತು. ಮಡಿವಾಳಪ್ಪನಿಗೆ ವರ್ಗಾವಣೆ ಮಾಡಿದ ಹೊಲದ ದಾಖಲೆಗಳಲ್ಲಿ ಅಜ್ಜಿ ತನ್ನ ಹೆಸರನ್ನ ಉಳಿಸಿಕೊಂಡಿದ್ದಳು. ಹೀಗಾಗಿ ಜಮೀನು ಮಾರಾಟ ಮಾಡಲು ಅಜ್ಜಿಯ ಸಹಿ ಅತ್ಯವಶ್ಯಕವಾಗಿತ್ತು. ಈ ಆಸ್ತಿಯನ್ನು ಮಡಿವಾಳಪ್ಪ ಮಾರಾಟ ಮಾಡಲು ಯತ್ನಿಸಿದಾಗ, ಅಜ್ಜಿ ವಿರೋಧಿಸಿದ್ದರು. ಇದರಿಂದ ಮಡಿವಾಳಪ್ಪ ತನ್ನನ್ನು ಮನೆ ಬಿಟ್ಟು ಹೊರ ಹಾಕಿದ್ದಾನೆ ಅಂತ ಅಜ್ಜಿ ಆರೋಪಿಸಿದ್ದಾಳೆ. ಹೀಗೆ ಹಲವಾರು ವರ್ಷಗಳಿಂದಲೂ ಅಜ್ಜಿ ಸಹಾಯಕ್ಕಾಗಿ ಅನೇಕರ ಬಳಿ ಹೋಗಿದ್ದಾಳೆ. ಕೊನೆಗೆ ಧಾರವಾಡದ ಸಾಧನಾ ಸಂಸ್ಥೆಯನ್ನು ಸಂಪರ್ಕಿಸಿದಾಗ ಅದರ ಮುಖ್ಯಸ್ಥೆ ಇಸಬೆಲ್ಲ ಝೇವಿಯರ್, ಅಜ್ಜಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದಾರೆ.
ಇನ್ನು, ಈ ಬಗ್ಗೆ ಮಡಿವಾಳಪ್ಪ ಹೇಳುವುದೇ ಬೇರೆ. ತಾಯಿಯ ಆಸ್ತಿಯಲ್ಲಿ ತನ್ನ ಪಾಲಿಗೆ ಬಂದ ಹೊಲದಲ್ಲಷ್ಟೇ ಈರವ್ವನ ಹೆಸರು ನಮೂದಾಗಿದೆ. ಆದರೆ ತನ್ನ ಅಣ್ಣ ಮುದುಕಪ್ಪನ ಹೊಲದ ಆರು ಎಕರೆ ಹೊಲದಲ್ಲಿ ಈರವ್ವನ ಹೆಸರು ದಾಖಲಾಗಿಲ್ಲ ಎಂದರು. ಆದರೂ ತಾನು ಆರು ಎಕರೆಯಲ್ಲಿ ಎರಡು ಎಕರೆ ಭೂಮಿಯನ್ನು ಬಿಟ್ಟು ಕೊಟ್ಟಿದ್ದೇನೆ. ಅದರಲ್ಲಿ ಸ್ವಲ್ಪ ಜಮೀನನ್ನು ಒಬ್ಬರಿಗೆ ಮಾರಾಟ ಮಾಡಲಾಗಿದೆ. ಅದರಲ್ಲಿಯೂ ಆಕೆಗೆ ಸಾಕಷ್ಟು ಹಣ ನೀಡಿದ್ದಲ್ಲದೇ ಆಕೆಗೊಂದು ಮನೆ ಕೂಡ ಕಟ್ಟಿಸಿಕೊಡಲಾಗಿದೆ. ವಿನಾ ಕಾರಣ ತಾಯಿಯೇ ತನ್ನ ವಿರುದ್ಧ ಈ ರೀತಿ ಆರೋಪ ಮಾಡುತ್ತಿರುವುದಾಗಿ ಹೇಳುತ್ತಿದ್ದಾನೆ. ಸದ್ಯ ಅಜ್ಜಿ ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ಸಂಬಂಧಿಕರನ್ನ ಕರೆಸಿ ವಿಚಾರಣೆ ನಡೆಸಿದ್ದಾರೆ.