ಹುಬ್ಬಳ್ಳಿ : ದೇಶ ಭಕ್ತಿಗೆ ಮತ್ತೊಂದು ಹೆಸರೇ ಸೈನಿಕ. ಅಂತಹ ಧೀರ ಸೈನಿಕನೋರ್ವ ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ್ದಾರೆ. ಸುಮಾರು 42 ಕಿ.ಮೀ ಓಡಿ ತಮ್ಮ ಹುಟ್ಟೂರು ತಲುಪಿದ ಸೈನಿಕನನ್ನ ಗ್ರಾಮಸ್ಥರು ಭವ್ಯವಾಗಿಯೇ ಸ್ವಾಗತಿಸಿದ್ದಾರೆ.
![A grand welcome from the villagers to the warrior who went to his hometown](https://etvbharatimages.akamaized.net/etvbharat/prod-images/kn-hbl-07-armyman-running-pkg-7208089_06102020151658_0610f_1601977618_775.png)
ಜನ್ಮ ಭೂಮಿ ಮೇಲಿನ ಪ್ರೀತಿಯಿಂದ 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧನೋರ್ವ ರನ್ನಿಂಗ್ ಮಾಡುತ್ತಲೇ ಸ್ವಗ್ರಾಮಕ್ಕೆ ತೆರಳಿದ್ದಾರೆ. ಕುಂದಗೋಳ ತಾಲೂಕಿನ ಚಂದ್ರಶೇಖರ್ ಬಿಚ್ಚಗತ್ತಿ ಎಂಬುವರೇ ರನ್ನಿಂಗ್ ಮಾಡುತ್ತ ಸ್ವಗ್ರಾಮಕ್ಕೆ ತೆರಳಿದ ನಿವೃತ್ತ ಯೋಧ.
![A grand welcome from the villagers to the warrior who went to his hometown](https://etvbharatimages.akamaized.net/etvbharat/prod-images/kn-hbl-07-armyman-running-pkg-7208089_06102020151658_0610f_1601977618_814.png)
ಬಿಎಸ್ಎಫ್ನಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧ ಚಂದ್ರಶೇಖರ್ ಬಿಚ್ಚಗತ್ತಿ, ಹುಬ್ಬಳ್ಳಿ ರೈಲು ನಿಲ್ದಾಣದಿಂದ ಕುಂದಗೋಳ, ಶಿರೂರ, ಸಂಶಿ ಮೂಲಕ ಸುಮಾರು 42 ಕಿ.ಮೀ ಕ್ರಮಿಸಿ ತನ್ನ ಹುಟ್ಟೂರಾದ ಚಾಕಲಬ್ಬಿ ಗ್ರಾಮ ತಲುಪಿದ್ದಾರೆ.
![A grand welcome from the villagers to the warrior who went to his hometown](https://etvbharatimages.akamaized.net/etvbharat/prod-images/kn-hbl-07-armyman-running-pkg-7208089_06102020151658_0610f_1601977618_251.png)
ಸ್ವಗ್ರಾಮ ತಲುಪಿದ ಚಂದ್ರಶೇಖರ್ ಅವರನ್ನು ಸ್ವಾಗತಿಸಿ ಸನ್ಮಾನಿಸಿದ ಕುಂದಗೋಳದ ಶಿವಾನಂದ ಶ್ರೀ, ಇಂದಿನ ಯುವ ಪೀಳಿಗೆಗೆ ಯೋಧ ಚಂದ್ರಶೇಖರ್ ಅವರು ಮಾದರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವಂತಾಗಲಿ ಎಂದು ಹರಸಿದರು.
![A grand welcome from the villagers to the warrior who went to his hometown](https://etvbharatimages.akamaized.net/etvbharat/prod-images/kn-hbl-07-armyman-running-pkg-7208089_06102020151658_0610f_1601977618_739.png)
ನನ್ನ ತಾಲೂಕಿನ ಒಂದೊಂದು ಮನೆಯಿಂದ ಓರ್ವ ವೀರ ಯೋಧ ದೇಶ ಸೇವೆಯಲ್ಲಿ ತೊಡಗುವಂತಾಗಬೇಕು ಎಂಬ ಹೆಬ್ಬಯಕೆಯನ್ನು ಹೊರಹಾಕಿದ ನಿವೃತ್ತ ಯೋಧ ಚಂದ್ರಶೇಖರ್, ಗ್ರಾಮೀಣ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ತಾವು ಈ ಹೊಸ ಹೆಜ್ಜೆ ಹಾಕಿರುವುದಾಗಿ ತಿಳಿಸಿದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಸ್ವಗ್ರಾಮ ತಲುಪಲು 42 ಕಿ.ಮೀ ಕ್ರಮಿಸಿದ ನಿವೃತ್ತ ಯೋಧ ಚಂದ್ರಶೇಖರ್ ಇದೀಗ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.