ಧಾರವಾಡ: ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಧಾರವಾಡದ ಮದಿಹಾಳ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಶ್ರೇಯಸ್ ಸಿನ್ನೂರು (16) ಮೃತ ಬಾಲಕನಾಗಿದ್ದಾನೆ. ವಿದ್ಯುತ್ ತಂತಿ ತಗುಲಿದ ತಕ್ಷಣ ಬಿಡಿಸಲು ಹೋಗಿದ್ದ ಮತ್ತೋರ್ವ ಬಾಲಕ ಗಾಯಗೊಂಡಿದ್ದಾರೆ. ಶ್ರೇಯಸ್ ಸ್ನೇಹಿತ ಪ್ರಣವ್ ಕೈಗೆ ಗಾಯವಾಗಿದೆ. ಸಂಜೆ ವೇಳೆ ಮನೆಯ ಮೇಲೆ ಹತ್ತಿದ ಬಾಲಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಇನ್ನು ಗಾಯಗೊಂಡ ಪ್ರಣವ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನೂ ಈ ಕುರಿತು ಮೃತ ಬಾಲಕ ಶ್ರೇಯಸ್ ತಂದೆ ಅಶೋಕ ಶಿನ್ನೂರ ಮಾತನಾಡಿದ್ದು, "ಸಂಜೆ 5ಕ್ಕೆ ಶಾಲೆಯಿಂದ ಬಂದು ಮನೆಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ, ಆಗ ಆಟ ಆಡಲು ಗೆಳೆಯ ಕರೆದಿದ್ದಾನೆ. ಆಗ ಹೊರಗೆ ಹೋಗಿದ್ದಾನೆ. ಇಬ್ಬರೂ ಪ್ರತಿದಿನ ಸಂಜೆ ಆಟ ಆಡುತ್ತಿದ್ದರು. ಚೆಂಡು ತೆಗೆದುಕೊಂಡು ಹೋಗಿದ್ದ ಆತ, ಹೋದ ಹತ್ತೇ ನಿಮಿಷದಲ್ಲಿ ಮಗ ಬಿದ್ದಿದ್ದಾನೆಂದು ಎಂದು ಕರೆದರು" ಎಂದು ಘಟನೆ ಬಗ್ಗೆ ವಿವರಿಸಿದರು.
"ಓಡಿ ಹೋಗಿ ನೋಡಿದಾಗ ವಿದ್ಯುತ್ ತಗುಲಿತ್ತು. ಮನೆ ಬಳಿ ಕಟ್ಟಡ ಕಾಮಗಾರಿ ನಡೆದಿದೆ. ಅಲ್ಲಿ ಆಟ ಆಡುತ್ತಿದ್ದರು. ಗೆಳೆಯ ಎಸೆದ ಬಾಲು ಹಿಡಿಯಲು ಹೋದಾಗ ವಿದ್ಯುತ್ ತಗುಲಿದೆ. ಕೈಯಿಂದ ಹೊಟ್ಟೆಯವರೆಗೆ ವಿದ್ಯುತ್ ಶಾಕ್ ಹೊಡೆದಿತ್ತು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ನಾನು ವೈದ್ಯರ ಕಾಲಿಗೂ ಬಿದ್ದು, ಮಗನನ್ನು ಉಳಿಸಿಕೊಡುವಂತೆ ಕೇಳಿದೆ. ಆದರೆ ಮಗ ಉಳಿಯಲಿಲ್ಲ. ಮಗ ನಗರದ ರಾಜೀವ್ ಗಾಂಧಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಆತನನ್ನು ಉಳಿಸಲು ಇನ್ನೋರ್ವ ಬಾಲಕ ಪ್ರಯತ್ನ ಪಟ್ಟಿದ್ದಾನೆ. ಆತನಿಗೂ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಸ್ ನನಗೆ ಒಬ್ಬನೇ ಮಗ" ಎಂದು ಗೋಳಾಡಿದರು.
ಕಳೆದ ವಾರ ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಸಾವು: ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ವೈಟ್ ಫೀಲ್ಡ್ನ ಕಾಡುಗೋಡಿಯಲ್ಲಿ ನಡೆದಿತ್ತು. ತಾಯಿ ಸೌಂದರ್ಯ ಹಾಗೂ 9 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದರು. ಸೌಂದರ್ಯ ಹಾಗೂ ಸಂತೋಷ್ ದಂಪತಿ ದೀಪಾವಳಿ ಹಬ್ಬಕ್ಕೆಂದು ಚೆನ್ನೈನ ಮನೆಗೆ ಹೋಗಿ ವಾಪಾಸಾಗುತ್ತಿದ್ದರು. ಬೆಳಗ್ಗಿನ ಜಾವ ಬಸ್ಸಿನಿಂದ ಇಳಿದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದ, ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದ ಸೌಂದರ್ಯ ಅವರು ಕತ್ತಲಿನಲ್ಲಿ ಗಮನಿಸಿದೇ ವಿದ್ಯುತ್ ತಂತಿ ಮೇಲೆ ತುಳಿದಿದ್ದರು. ಪತ್ನಿ ಹಾಗೂ ಮಗಳನ್ನು ಕಾಪಾಡಲು ಸಂತೋಷ್ ಪ್ರಯತ್ನಿಸಿದ್ದು, ಸಾಧ್ಯವಾಗಿರಲಿಲ್ಲ. ರಕ್ಷಣೆ ವೇಳೆ ವಿದ್ಯುತ್ ಪ್ರವಹಿಸಿ ಸಂತೋಷ್ ಅವರಿಗೂ ಕೈಸುಟ್ಟಿದ್ದು, ಆಸ್ಪತ್ರೆಗೆ ದಾಕಲಾಗಿದ್ದರು. ಈ ಘಟನೆ ಸಂಬಂಧ ಬೆಸ್ಕಾಂನ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: ಮಂಡ್ಯದಲ್ಲಿ ವಿದ್ಯುತ್ ತಂತಿ ತುಳಿದು ಯುವ ರೈತ ಸಾವು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ