ಧಾರವಾಡ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144 ಜಾರಿಗೊಳಿಸಿ, ಸಾರ್ವಜನಿಕರಿಗೆ ಮನೆಯಿಂದ ಹೊರಬಂದಂತೆ ಆದೇಶಿಸಲಾಗಿದೆ. ಆದ್ರೆ ತರಕಾರಿ, ಹಾಲು, ಕಿರಾಣಿ ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳನ್ನು ಪೂರೈಸಲು ಹಾಗೂ ಕೋವಿಡ್ 19 ತಡೆಗಟ್ಟುವ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ, ಖಾಸಗಿ ಸಂಸ್ಥೆಯ ವಾಹನಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆ ಹಾಗೂ ಕಚೇರಿಗಳಿಂದ ನೀಡಲ್ಪಟ್ಟ ಗುರುತಿನ ಚೀಟಿಗಳನ್ನು ಹೊಂದಿರುವ ಕರ್ತವ್ಯನಿರತರಿಗೆ ಅವರ ಕಾರ್ಯಕ್ಷೇತ್ರದಲ್ಲಿ ವಿನಾಯಿತಿ ನೀಡಲಾಗಿದೆ. ಎಲ್ಲಾ ಸರ್ಕಾರಿ ವಾಹನಗಳಿಗೆ ವಿನಾಯಿತಿ ಇದೆ. ಸರ್ಕಾರ ಹೊರಗುತ್ತಿಗೆ ಮೂಲಕ ಪಡೆದುಕೊಂಡ ಖಾಸಗಿ ವಾಹನಗಳಿಗೆ ಜಿಲ್ಲಾಡಳಿತ ಪಾಸುಗಳನ್ನು ನೀಡಿದೆ.
ಸಾರ್ವಜನಿಕ ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಕಾರರು ಮತ್ತು ಸಿಬ್ಬಂದಿಗಳ ವಾಹನಗಳಿಗೆ, ಸರ್ಕಾರಿ ಮತ್ತು ಖಾಸಗಿ ವೈದ್ಯರು, ನರ್ಸ್ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಸಿಬ್ಬಂದಿ, ವಾಹನಗಳು, ಪತ್ರಿಕೆ ಹಂಚುವವರು, ಅವಶ್ಯಕ ಸರಕು ಸೇವೆಗಳ ಸಾಗಣಿಕೆ ವಾಹನಗಳು, ಅವಶ್ಯಕ ಸಾಮಗ್ರಿಗಳ ಉತ್ಪಾದನಾ ಕಾರ್ಖಾನೆಗಳ ಕಾರ್ಮಿಕರಿಗೆ ಸರ್ಕಾರದ ಸುತ್ತೋಲೆಯ ನಿರ್ಬಂಧದಂತೆ ಅವರ ವಾಸ ಸ್ಥಳದಿಂದ ಕಾರ್ಖಾನೆಯ ಸ್ಥಳಕ್ಕೆ ಹೋಗಿ ಬರಲು ಹಾಗೂ ಜಿಲ್ಲಾಡಳಿತ ಕೋವಿಡ್ 19 ಸೇವೆಯಲ್ಲಿ ನಿರತರಾದವರಿಗೆ ನೀಡಿದ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳು ಮತ್ತು ವಾಹನಗಳಿಗೆ ಸಂಚರಿಸಲು ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.