ಹುಬ್ಬಳ್ಳಿ : ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವ ಅಗತ್ಯವಿಲ್ಲ. ಇವತ್ತು ಭಾರತ್ ಜೋಡೋ ಆಗಬೇಕಿರುವುದು ಭಾರತದ ಒಳಗೆ ಅಲ್ಲ. ಯಾವ ಕಾಂಗ್ರೆಸ್ ಭಾರತದ ಭಾಗವನ್ನು ಬಿಟ್ಟು ಕೊಟ್ಟಿದ್ದಾರೋ ಆ ಜಾಗದಲ್ಲಿ ಭಾರತ್ ಜೋಡೋ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ವಿವಿಧ ಇಲಾಖೆಯಲ್ಲಿ ಉದ್ಯೋಗ ಪಡೆದವರಿಗೆ ಉದ್ಯೋಗಪತ್ರ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಪಾದಯಾತ್ರೆ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಹಿಮಾಲಯದಲ್ಲಿ ಆಗಬೇಕು. ಭಾರತದ ಕೈ ಕಾಲು ಕತ್ತರಿಸೋ ಪ್ರಯತ್ನಪಟ್ಟಿದಾರೆ. ಆ ಜಾಗದಲ್ಲಿ ನೀವು ಭಾರತ್ ಜೋಡೋ ಮಾಡಿ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರತ್ ಜೋಡೋ ಅಗತ್ಯವಿಲ್ಲ. ನಾನು ನಮ್ರವಾಗಿ ಕಾಂಗ್ರೆಸ್ ಗೆ ವಿನಂತಿ ಮಾಡುತ್ತೇನೆ. ನೀವು ಅಲ್ಲಿ ಹೋಗಿ ಭಾರತ್ ಜೋಡೋ ಯಾತ್ರೆ ಮಾಡಿ ಎಂದು ಹೇಳಿದರು.
ಇನ್ನು, ಕಾಂತಾರ ಸಿನಿಮಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ನಮ್ಮದೇ ಶೈಲಿಯಲ್ಲಿ ಭೂತಾರಾಧನೆ ಮಾಡುತ್ತೇವೆ. ನಾನು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಿಂದ ಬಂದವಳು. ಜೊತೆಗೆ ಕೇರಳದಲ್ಲೂ ಇದೇ ರೀತಿಯ ಆರಾಧನೆ ಇದೆ. ನಾವು ನಾಗಾರಾಧನೆಯನ್ನು ಮಾಡುತ್ತೇವೆ. ಯಾರೂ ಭೂತಾರಾಧನೆ ಬಗ್ಗೆ ಮಾತನಾಡಬಾರದು. ಅದು ನಾವು ಆರಾಧನೆ ಮಾಡೋ ಪದ್ಧತಿ. ಅದರಿಂದ ನಮಗೆ ನೆಮ್ಮದಿ ಸಿಕ್ಕಿದೆ. ನೀವು ನಂಬಿಲ್ಲ ಅಂದರೆ ಬಿಟ್ಟು ಬಿಡಿ. ಈ ದೇಶದಲ್ಲಿ ನಾಸ್ತಿಕನಿಗೂ ಜಾಗ ಇದೆ, ಆಸ್ತಿಕನಿಗೂ ಜಾಗ ಇದೆ ಎಂದರು.
ಉದ್ಯೋಗ ಪತ್ರ ನೀಡಿದ ಕೇಂದ್ರ ಸಚಿವೆ ಕರಂದ್ಲಾಜೆ : ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ವಿವಿಧ ಇಲಾಖೆಯಲ್ಲಿ ಉದ್ಯೋಗ ಪಡೆದವರಿಗೆ ಸಚಿವೆ ಶೋಭಾ ಕರಂದ್ಲಾಜೆ ಉದ್ಯೋಗಪತ್ರ ನೀಡಿದರು. ದೇಶದ ವಿವಿಧ 50 ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆದಿದ್ದು, ನಗರದಲ್ಲಿ ಸುಮಾರು 25 ಜನರಿಗೆ ಉದ್ಯೋಗ ಪತ್ರ ವಿತರಣೆ ಮಾಡಿದರು. ಮುಂದಿನ ಒಂದು ವರ್ಷದೊಳಗೆ 10 ಲಕ್ಷ ಉದ್ಯೋಗ ನೀಡುವ ಗುರಿ ಇದೆ ಎಂದು ಇದೇ ವೇಳೆ ಹೇಳಿದರು. ರಾಜ್ಯಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪ್ರಧಾನಿ ಮೋದಿಯವರು ಕರೆಕೊಟ್ಟಿದ್ದಾರೆ. ದೇಶದ 50 ಕೇಂದ್ರಗಳಲ್ಲಿ 50 ಸಚಿವರು ಉದ್ಯೋಗ ಪತ್ರ ನೀಡಿದ್ದೇವೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಚಿವೆ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವಕ ಯುವತಿಯರು : ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಹೊರಟಿದ್ದ ಕೇಂದ್ರ ಸಚಿವರ ಜೊತೆ ಯುವಕ ಯುವತಿಯರು ಸೆಲ್ಫಿಗೆ ಮುಗಿಬಿದ್ದರು. ಈ ವೇಳೆ ಮಹಿಳೆಯೊಬ್ಬರ ಮೊಬೈಲ್ ತೆಗೆದುಕೊಂಡು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಫೋಟೋ ತೆಗೆದರು.
ಇದನ್ನೂ ಓದಿ : 10 ಲಕ್ಷ ನೇಮಕ: ಉದ್ಯೋಗ ಮೇಳಕ್ಕೆ ಪಿಎಂ ಮೋದಿ ಚಾಲನೆ