ದಾವಣಗೆರೆ: ದಮನಿತ ಮತ್ತು ನೊಂದ ಹೆಣ್ಣುಮಕ್ಕಳಿಗೆ ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು. ಅವರಿಗೆ ನ್ಯಾಯ ಒದಗಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು ಹಾಗೂ ಮಹಿಳಾ ಆಯೋಗ ಕೈಜೋಡಿಸಿ ಕುಟುಂಬದಂತೆ ಕೆಲಸ ಮಾಡೋಣ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿ.ಪಂ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರೊಂದಿಗೆ ಮಹಿಳಾ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಲಾಕ್‍ಡೌನ್ ವೇಳೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಸೇರಿದಂತೆ ಸರ್ಕಾರದ ಸೌಲಭ್ಯಗಳು ದೊರಕಿಲ್ಲವೆಂಬ ದೂರು ಇತರೆ ಜಿಲ್ಲೆಗಳಲ್ಲಿ ಕೇಳಿ ಬಂದಿದ್ದವು. ದಾವಣಗೆರೆಯಲ್ಲಿ ಅವರನ್ನು ಗುರುತಿಸಿ ಎರಡು ಮೂರು ಬಾರಿ ಆಹಾರದ ಕಿಟ್ ನೀಡಲಾಗಿದೆ ಎಂದು ತಿಳಿದುಬಂದಿದೆ ಎಂದರು.
ಅಲ್ಲದೇ ಜಿಲ್ಲೆಯಲ್ಲಿ ಒಟ್ಟು 801 ನೋಂದಾಯಿತ ಅಲ್ಪಸಂಖ್ಯಾತರಿದ್ದು ಇವರಿಗೆ ವಸತಿ ಇಲ್ಲದೇ ಇರುವ ಕಾರಣ ಆಧಾರ್ ಮತ್ತು ಇತರೆ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಡಿಸಿ ಯವರು ಸರ್ಕಾರದ ಜಾಗ ಗುರುತಿಸಿ ಆಶ್ರಯ ಯೋಜನೆಯಡಿ ಜಿ ಪ್ಲಸ್ ಮಾದರಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಸಖಿ ಒನ್‍ಸ್ಟಾಪ್ ಕೇಂದ್ರದಲ್ಲಿ ಏಪ್ರಿಲ್ ನಲ್ಲಿ 1, ಲಾಕ್‍ಡೌನ್ ವೇಳೆ ಮೇ ಮತ್ತು ಜೂನ್ ತಲಾ 4, ಜುಲೈ 4 ಒಟ್ಟು 12 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಮಾರ್ಚ್ ನಿಂದ ಜುಲೈವರೆಗೆ ಒಟ್ಟು 12 ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 9 ಪ್ರಕರಣಗಳಿಗೆ ವೈದ್ಯಕೀಯ ನೆರವಿಗೆ ರೂ.5000 ಆರ್ಥಿಕ ಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್‍ಐವಿ ಇರುವ ಗಂಡು ಮಕ್ಕಳು ಸತ್ಯ ಮರೆಮಾಚಿ ಮದುವೆಯಾಗಿ ಎಷ್ಟೋ ಹೆಣ್ಣು ಮಕ್ಕಳಿಗೆ ಹೆಚ್‍ಐವಿ ಸೋಂಕು ತಗುಲಿಸಿ ಯಾತನೆ ಅನುಭವಿಸುತ್ತಿರುವ ಪ್ರಕರಣ ನನ್ನ ಮುಂದೆ ಬಂದಿದ್ದು, ಮದುವೆಗೂ ಮುನ್ನ ವೈದ್ಯಕೀಯ ವರದಿ ಪಡೆಯುವ ಬಗ್ಗೆ ಹೆಚ್ಚಿನ ಜಾಗೃತಿ ಕೈಗೊಳ್ಳುವ ಅವಶ್ಯಕತೆ ಇದೆ. ಪೊಲೀಸ್ ಇಲಾಖೆಯೂ ಸಹ ಈ ಜಾಗೃತಿ ಮೂಡಿಸುವಲ್ಲಿ ಸಹಕರಿಸಬೇಕೆಂದು ಪ್ರಮೀಳಾ ನಾಯ್ಡು ಹೇಳಿದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ನಗರದ ಪ್ರತಿ ಠಾಣೆಯಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಕಾರ್ಯ ನಿರ್ವಹಿಸುತ್ತಿದೆ. ದುರ್ಗಾ ಪಡೆಯಲ್ಲಿ ಮಹಿಳಾ ಪಿಸಿಗಳು, ಹೆಚ್‍ಸಿಗಳು, ಎಎಸ್‍ಐ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಮಹಿಳೆಯರ ಸರಗಳ್ಳತನ ಹೆಚ್ಚಾಗಿದ್ದು ಇರಾನಿ ತಂಡವನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ 3 ಜನರನ್ನು ಗುರುತಿಸಲಾಗಿದೆ. ಮಹಿಳಾ ದೌರ್ಜನ್ಯ ತಡೆ ವಿರುದ್ಧ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.