ದಾವಣಗೆರೆ: ಜಿಲ್ಲೆಯ ರಾಮನಗರದಲ್ಲಿರುವ ಬಾಲಕಿಯರ ಭವನ ಇಂದು ಅಕ್ಷರಶಃ ಮಾವಿನ ತೋರಣ, ಹೂವುಗಳಿಂದ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಡಿಸಿ ಮಹಾಂತೇಶ್ ಬೀಳಗಿಯವರು ಅನಾಥ ಹೆಣ್ಣುಮಗಳನ್ನು ಮದುವೆ ಮನೆಗೆ ಕರೆತಂದರು.
ಬಾಲಕಿಯರ ಭವನದಲ್ಲಿಯೇ ಬೆಳೆದ ಸೌಮ್ಯ (23) ಎಂಬ ಹೆಣ್ಣು ಮಗಳ ಮದುವೆಯನ್ನು ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಮಾಡಲಾಯಿತು. ಅನಾಥ ಹೆಣ್ಣು ಮಗಳಾದ ಸೌಮ್ಯಳ ಮದುವೆಯನ್ನು ಇಡೀ ಜಿಲ್ಲಾಡಳಿತ ಪೋಷಕರ ಸ್ಥಾನದಲ್ಲಿ ನಿಂತು, ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಕಡೆಕೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟರಿಗೆ ಧಾರೆ ಎರೆದು ಕೊಟ್ಟಿತು.
ಇಲ್ಲಿಯವರಗೆ ಈ ಬಾಲಕಿಯರ ಭವನ 40 ಮದುವೆಗಳಿಗೆ ಸಾಕ್ಷಿಯಾಗಿದೆ. ದಾವಣಗೆರೆ ರಾಜ್ಯ ಮಹಿಳಾ ನಿಲಯ ಮತ್ತೆ ಇವತ್ತು ಒಂದು ಜೋಡಿಯ ಮದುವೆ ಮಾಡಿದೆ. ಈ ಮದುವೆಯ ನೇತೃತ್ವವನ್ನು ಜಿಲ್ಲಾಡಳಿತ ವಹಿಸಿತ್ತು. ಇಲ್ಲಿ ಅರ್ಧದಷ್ಟು ಉತ್ತರ ಕನ್ನಡ ಜಿಲ್ಲೆಯವರೇ ಮದುವೆ ಆಗಿದ್ದಾರೆ. ಶೇ. 70ರಷ್ಟು ಬ್ರಾಹ್ಮಣ ಸಮುದಾಯದವರೇ ಮುದುವೆಯಾಗಿದ್ದಾರೆ. ರಾಜ್ಯದ ವಿವಿಧ ಕಡೆಯಿಂದ ಅರ್ಜಿಗಳು ಬರುತ್ತಿದ್ದು, ಆ ಭಾಗದಲ್ಲಿ ಅಡಿಕೆ ತೋಟಗಳು ಇರುವುರಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳಿಗೆ ತೊಂದರೆ ಆಗಬಾರದು ಎಂದು ಆದಾಯ ನೋಡಿ ಅಧಿಕಾರಿಗಳು ಮದುವೆ ಮಾಡಿಕೊಡುತ್ತಿದ್ದಾರೆ. ಇನ್ನು ಇಲ್ಲಿಂದ ಮದುವೆಯಾಗಿ ಹೋದವರು ತುಂಬಾ ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ. ಅದರ ಜೊತೆ ಉತ್ತಮವಾದ ಸಂಸಾರ ನಡೆಸುತ್ತಿದ್ದಾರಂತೆ.
ಓದಿ:ದಾವಣಗೆರೆ: ಮಾಸ್ಕ್ ಧರಿಸುವಂತೆ ಜನತೆಯಲ್ಲಿ ಮನವಿ ಮಾಡಿದ ಡಿಸಿ, ಎಸ್ಪಿ
ಇಂದು ನಡೆದ ಮದುವೆ ಬಹಳ ವಿಶೇಷತೆಯಿಂದ ಕೂಡಿತ್ತು. ಮದುವೆಗೆ ಆಗಮಿಸಿದವರಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ಮದುವೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಮುಂದೆ ನಿಂತು ವಧುವನ್ನು ಕರೆ ತಂದು ಧಾರೆ ಎರೆದುಕೊಟ್ಟರು.