ದಾವಣಗೆರೆ: ಯುಪಿಎ ಸರ್ಕಾರ ಒಡೆದು ಆಳುವ ನೀತಿಯನ್ನು ಮಾಡುತ್ತಿತ್ತು. ಆದರೆ, ಮೋದಿ ಜಾತಿ ತಾರತಮ್ಯವಿಲ್ಲದೇ ಸಬ್ ಕಾ ವಿಕಾಸ್ ಎಂಬ ನೀತಿ ಜಾರಿ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವೃತ್ತಿಪರರು ಮತ್ತು ಕೀ ವೋಟರ್ ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕದ ಎಲೆಕ್ಷನ್ ಹತ್ತಿರದಲ್ಲಿದ್ದು, ನಮ್ಮದು ದೊಡ್ಡ ಜವಾಬ್ಧಾರಿ ಇದೆ. ದೇಶದ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಿದ್ದೇವೆ. ಯುಪಿಎ ಹಾಗು ಸಮ್ಮಿಶ್ರ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿದ್ದು, ವೋಟ್ ಬ್ಯಾಂಕ್ ರಾಜಕಾರಣ, ಒಡೆದು ಆಳುವ ನೀತಿಯನ್ನು ಅನುಸರಿಸಿವೆ. ಆದರೆ, ನಮ್ಮ ಪ್ರಧಾನಿ ಮೋದಿಯವರು ಜಾತಿ ತಾರತಮ್ಯವಿಲ್ಲದೆ, ವೋಟ್ ಬ್ಯಾಂಕ್ ಪಾಲಿಟಿಕ್ಸ್ ಇಲ್ಲದೇ ಸಬ್ ಕಾ ವಿಕಾಸ್ ಎಂದು ಆಡಳಿತ ನಡೆಸುತ್ತಿದ್ದಾರೆ ಎಂದರು.
ನಮ್ಮದು ಅಕೌಂಟಬಲ್ ಸರ್ಕಾರ: 48 ದೇಶಗಳು ಭಾರತದಿಂದ ವ್ಯಾಕ್ಸಿನ್ ಸೌಲಭ್ಯ ಪಡೆದುಕೊಂಡಿವೆ. ನಮ್ಮದು ಅಕೌಂಟಬಲ್ ಸರ್ಕಾರವಾಗಿದ್ದು, ಯುರೋಪ್, ಚೀನಾ ದೇಶಗಳು ಕೊರೊನಾದಿಂದ ನಲುಗಿದ ಸಂದರ್ಭದಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳು ಜಗತ್ತಿಗೆ ಮಾದರಿಯಾಗಿವೆ. ಕೊರೊನಾ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ಟೆಸ್ಟಿಂಗ್ ಲ್ಯಾಬ್, ಬೆಡ್ ಹೀಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದು ಇತಿಹಾಸ. 25 ವರ್ಷಗಳ ಹಿಂದೆ ಪಲ್ಸ್ ಪೋಲಿಯೋ ಲಸಿಕೆ ಬಂತು, ಅದು ಬಂದ 25 ವರ್ಷಗಳ ನಂತರ ನಮಗೆ ವ್ಯಾಕ್ಸಿನ್ ಬಂದವು. ಮೋದಿಯವರು ವಿಜ್ಞಾನಿಗಳು, ತಜ್ಞರನ್ನು ಪ್ರೋತ್ಸಾಹಿಸಿ 9 ತಿಂಗಳಲ್ಲಿ ಎರಡು ವ್ಯಾಕ್ಸಿನ್ ತರಲಾಯಿತು. ಡಬಲ್ ಡೋಸ್, ಸೂಪರ್ ಡೋಸ್ ಕೊಟ್ಟ ಸರ್ಕಾರ ನಮ್ಮದು ಎಂದು ಸಮರ್ಥಿಸಿಕೊಂಡರು.
ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ನಂಬರ್ 1: ಕರ್ನಾಟಕ ಫಾರಿನ್ ಇನ್ವೆಸ್ಟ್ಮೆಂಟ್ನಲ್ಲಿ ನಂಬರ್ 1 ಆಗಿದೆ ಎಂದು ರಾಜ್ಯವನ್ನು ಕೊಂಡಾಡಿದ ನಡ್ಡಾ, 2014ರಲ್ಲಿ ಮೂರು ಸಾವಿರ ಇದ್ದ ಫೈಬರ್ ಲೈನ್ ಇದೀಗ 2 ಲಕ್ಷ 80 ಸಾವಿರ ಕಿಮೀ ವಿಸ್ತರಣೆಯಾಗಿದೆ. ಜಗತ್ತಿನ ಐದನೇ ಆರ್ಥಿಕತೆಯಾಗಿ ಭಾರತ ಮುಂದುವರಿದ ದೇಶವಾಗುತ್ತಿದೆ. ಕೆಮಿಕಲ್ ರಪ್ತು, ಡಿಫೆನ್ಸ್, ಮೊಬೈಲ್ ಕ್ಷೇತ್ರದಲ್ಲಿ ಜಗತ್ತೇ ಹುಬ್ಬೇರುವ ಸಾಧನೆ ಮಾಡಿದ ದೇಶ ನಮ್ಮದು. ನ್ಯೂ ಎಜುಕೇಶನ್ ಪಾಲಿಸಿ ವಿದ್ಯಾರ್ಥಿಗಳ ಯೋಚನಾ ರೀತಿ ಬದಲಾಯಿಸಿದೆ, ಡಿಜಿಟಲ್ ಇಂಡಿಯಾ ಆಗಿ ಭಾರತ ಬದಲಾಗಿದೆ. 10 ಕೋಟಿ 72 ಲಕ್ಷ ಕುಟುಂಬಗಳ 50 ಸಾವಿರ ಕೋಟಿ ಜನ ಆಯುಷ್ಮಾನ್ ಭಾರತ ಯೋಜನೆಯ ಒಳಗಿದ್ದಾರೆ ಎಂದರು.
12 ಕೋಟಿ ಮಹಿಳೆಯರು ಗೌರವದಿಂದ ಬದುಕುವ ಅವಕಾಶ ಕಲ್ಪಿಸಿದೆ: ಸ್ವಚ್ಛ ಭಾರತ ಅಭಿಯಾನದಲ್ಲಿ 12 ಕೋಟಿ ಶೌಚಾಲಯ ನಿರ್ಮಿಸುವ ಮೂಲಕ 12 ಕೋಟಿ ಮಹಿಳೆಯರು ಗೌರವದಿಂದ ಬದುಕುವ ಅವಕಾಶ ಕಲ್ಪಿಸಲಾಗಿದೆ. 11 ಕೋಟಿ ಜನ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಆಯುಷ್ಮಾನ್ ಭಾರತ ಫಲಾನುಭವಿಗಳು ಇಂದು ಸಂತೋಷವಾಗಿದ್ದಾರೆ. ಕಾರ್ಮಿಕ ವರ್ಗದವರಿಗೆ ಪ್ರತಿ ವರ್ಷ 5 ಲಕ್ಷ ಇನ್ಶೂರೆನ್ಸ್ ಕವರೇಜ್ ಆಗುತ್ತಿದೆ. 10 ಕೋಟಿ ಜನ ಜಲಜೀವನ ಮಿಷನ್ ಫಲಾನುಭವಿಗಳಾಗಿದ್ದಾರೆ. ಅಂದು ಎರಡು ಪಂಚಾಯಿತಿಗಳಿಗೆ 1 ಇಂದಿರಾ ಆವಾಸ್ ಯೋಜನೆ ಮನೆ ಸಿಗುತ್ತಿತ್ತು. ಆದರೆ, ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 3 ಕೋಟಿ ಮನೆ ಕಟ್ಟಿದ್ದೇವೆ ಎಂದು ತಿಳಿಸಿದರು.
ದಾವಣಗೆರೆಯಿಂದಲೇ ವಿಜಯಯಾತ್ರೆ ಆರಂಭ, 150 ಸ್ಥಾನ ಗೆದ್ದೆ ಗೆಲ್ಲುತ್ತೇವೆ- ನಳಿನ್ ಕುಮಾರ್ ಕಟೀಲ್: ದಾವಣಗೆರೆಯಿಂದಲೇ ವಿಜಯಯಾತ್ರೆ ಆರಂಭಿಸಿದ್ದೇವೆ. 150 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ದೇಶದ ಅತಿಹೆಚ್ಚಿನ ಕಾರ್ಯಕರ್ತರನ್ನು ಪಡೆದ, ಸಂಸದರನ್ನು, ಶಾಸಕರು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಕ್ಷವನ್ನು ಗೆಲ್ಲಿಸುವ ರೂವಾರಿ ನಡ್ಡಾ ಜೀಗೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ವಿಶ್ವಾಸದ ಮಾತುಗಳನ್ನಾಡಿದರು.
ನಡ್ಡಾ ಅವರು ಸಾಮಾನ್ಯ ಕಾರ್ಯಕರ್ತನ ಮನೆಯಲ್ಲಿ ಬಿಜೆಪಿ ಧ್ವಜ ಹಾರಿಸಿ ವಿಜಯಯಾತ್ರೆ ಆರಂಭಿಸಿದ್ದಾರೆ. ಪ್ರತಿಯೊಂದು ಬೂತ್ಗಳಲ್ಲಿ ನಮ್ಮ ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರ ಜೊತೆಗೆ ದೆಹಲಿಯಿಂದ ಆಗಮಿಸಿ ಸಮಾವೇಶ ಮಾಡಿದ ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಂದ್ರೆ ಅದು ನಡ್ಡಾ ಅವರು ಮಾತ್ರ. ನಡ್ಡಾ ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಹಾಡಿ ಹೊಗಳಿದರು.
ಇದನ್ನೂ ಓದಿ: ರಾಜ್ಯದ ವಿವಿಧ ಮಠಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಶ್ರೀಗಳೊಂದಿಗೆ ಗೌಪ್ಯ ಸಭೆ