ಬೆಂಗಳೂರು: ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ (ನ.29) ನಡೆದ ಯುವತಿ ಆತ್ಮಹತ್ಯೆಗೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆತ್ಮಹತ್ಯೆಗೆ ಯುವತಿಯ ಸ್ನೇಹಿತನೇ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಪ್ರಿಯಾಂಕಾ ಮನೆಯ ಕಟ್ಟಡದ ಮೊದಲ ಮಹಡಿಯ ಹೊರಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಯುವತಿಯ ಸ್ನೇಹಿತೆಯರನ್ನು ಸಂಪರ್ಕಿಸಿದಾಗ ದಿಗಂತ್ ಎಂಬಾತನಿಗೆ ಹಣ ನೀಡಿ ವಂಚನೆಗೊಳಗಾಗಿರುವುದು ತಿಳಿದುಬಂದಿತ್ತು. ಅಲ್ಲದೆ, ಪ್ರಿಯಾಂಕಾಳ ಮೊಬೈಲ್ ಪರಿಶೀಲಿಸಿದಾಗ ಮೊಬೈಲ್ನ ಬ್ಯಾಕ್ ಕವರ್ನಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಕಾಲೇಜಿನಲ್ಲಿ ಸ್ನೇಹಿತನಾಗಿದ್ದ ದಿಗಂತ್ ಎಂಬುವನಿಗೆ 15 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದೆ. ಚಿನ್ನ ವಾಪಸ್ ನೀಡದೆ ಸತಾಯಿಸುತ್ತಿದ್ದ. ನನ್ನ ಬಗ್ಗೆ ಬೇರೆಯವರ ಬಳಿ ಇಲ್ಲಸಲ್ಲದಿರುವುದನ್ನ ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದ. ನನ್ನ ಸಾವಿಗೆ ದಿಗಂತ್ ಕಾರಣ' ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾಳೆ ಎಂದು ಮೃತಳ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೃತ ಯುವತಿಯ ತಂದೆ ಚಿನ್ನದ ವ್ಯಾಪಾರಿಯಾಗಿದ್ದಾರೆ. ಇದನ್ನು ತಿಳಿದುಕೊಂಡೇ ದಿಗಂತ್ ಆಕೆಯ ಸ್ನೇಹ ಮಾಡಿದ್ದ. ಕ್ಯಾಸಿನೋದಲ್ಲಿ ಹಣ ಹೂಡಿ, ದುಪ್ಪಟ್ಟು ಸಂಪಾದಿಸಿ ಕೊಡುವುದಾಗಿ ಆತ ಆಮಿಷವೊಡ್ಡಿದ್ದ. ಇದನ್ನು ನಂಬಿ ಮನೆಯಲ್ಲಿ ಯಾರಿಗೂ ತಿಳಿಯದಂತೆ 15 ಲಕ್ಷ ರೂ. ಮೌಲ್ಯದ ಒಡವೆಗಳನ್ನು ದಿಗಂತನಿಗೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಸದ್ಯ ದಿಗಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಡೆತ್ ನೋಟ್ ಆಧರಿಸಿ ಆತನ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಇನ್ಶೂರೆನ್ಸ್ ಹಣಕ್ಕಾಗಿ ಸ್ನೇಹಿತರ ಜೊತೆಗೂಡಿ ಅಣ್ಣನನ್ನೇ ಕೊಂದ ತಮ್ಮ!