ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ಚೂರಿ ಇರಿದು ಯುವಕನೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
20 ವರ್ಷ ವಯಸ್ಸಿನ ಹೇಮಂತ್ ಮತ್ತು 21 ವರ್ಷದ ಲೋಹಿತ್ ಬಂಧಿತ ಆರೋಪಿಗಳು. ಹೊನ್ನಾಳಿಯ ದುರ್ಗಿಗುಡಿ ನಿವಾಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ದಯಾನತ್ ಖಾನ್ ಎಂಬ ಯುವಕನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು.
ಇದನ್ನು ಓದಿ: ಹೊನ್ನಾಳಿಯಲ್ಲಿ ಹರಿದ ನೆತ್ತರು.. ಚಾಕುವಿನಿಂದ ಇರಿದು ಯುವಕನ ಕೊಲೆ..!
ಹೇಮಂತ್, ಲೋಹಿತ್ ಮತ್ತು ದಯಾನತ್ ಖಾನ್ ನಡುವೆ ಕಳೆದ ಒಂದು ವಾರದ ಹಿಂದೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿತ್ತು. ಆಗಾಗ್ಗೆ ಇವರ ನಡುವೆ ಗಲಾಟೆ ನಡೆಯುತಿತ್ತು. ಆದ್ರೆ, ಇದು ಇಬ್ಬರು ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಹೇಮಂತ್ ಮತ್ತು ಲೋಹಿತ್ ಬ್ಯಾಂಡೇಜ್ ಕಟ್ಟಿಕೊಂಡು ಬಂದಿದ್ದರೂ ಅವರ ಪೋಷಕರು ಸರಿಯಾಗಿ ವಿಚಾರಿಸಿದ್ದರೆ ಇಂಥ ಹತ್ಯೆ ನಡೆಯುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಶುಕ್ರವಾರವೂ ಜಗಳ ನಡೆದಿದ್ದು, ದಯಾನತ್ ಖಾನ್ ಕೂಡ ಹೇಮಂತ್ ಮತ್ತು ಲೋಹಿತ್ಗೆ ಚಾಕುವಿನಿಂದ ಇರಿದಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ದಯಾನತ್ ಖಾನ್ ಮೇಲೆ 20 ಕ್ಕೂ ಹೆಚ್ಚು ಬಾರಿ ಚೂರಿಯಿಂದ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.
ದಯಾನತ್ ಖಾನ್ ಹತ್ಯೆ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಜೆ. ಉದೇಶ್ ನೇತೃತ್ವದಲ್ಲಿ ಹತ್ಯೆ ನಡೆದ 24 ಗಂಟೆಯೊಳಗಾಗಿ ಸಿಪಿಐ ಬ್ರಿಜೇಶ್ ಮ್ಯಾಥ್ಯೂ, ಪಿಎಸ್ ಐ ರಾಘವೇಂದ್ರ ಮತ್ತು ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.