ದಾವಣಗೆರೆ: ನಗರದ ಕೆ ಆರ್ ರಸ್ತೆಯಲ್ಲಿ ಇರುವ ಗುರುನಾಥ ಖಾಸಗಿ ಆಸ್ಪತ್ರೆ ಇಂದು ರಣರಂಗವಾಗಿತ್ತು. ಆಸ್ಪತ್ರೆಯ ವೈದ್ಯ ಡಾ. ದಿಲೀಪ್ ಬೊಂದಡೆ ಕಳೆದ 15 ದಿನಗಳ ಹಿಂದೆ ಮಾಡಿದ್ದ ಶಸ್ತ್ರಚಿಕಿತ್ಸೆಯ ಎಡವಟ್ಟಿನಿಂದಾಗಿ 65 ವರ್ಷದ ಅನ್ನಪೂರ್ಣಮ್ಮ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಹೊಟ್ಟೆ ನೋವು ಇದ್ದ ಕಾರಣ ವೈದ್ಯ ಡಾ. ದಿಲೀಪ್ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದರು. ಶಸ್ತ್ರ ಚಿಕಿತ್ಸೆ ಏನೋ ಆಯಿತು. ಆದ್ರೆ ಬಳಿಕ ಕೊಯ್ದ ಹೊಟ್ಟೆಗೆ ಹೊಲಿಗೆ ಹಾಕಿರಲಿಲ್ಲ. ಹತ್ತು ದಿನಗಳಾದ್ರು ವೃದ್ಧೆಗೆ ನೋವು ಕಡಿಮೆ ಆಗಲಿಲ್ಲ. ಮೇಲಾಗಿ ಮೂರು ಲಕ್ಷ ರೂಪಾಯಿ ಬಿಲ್ ಆಗಿದ್ದು, ಕೇಳಿದ್ರೆ ತಾನಾಗೆ ಗಾಯ ಮಾಯವಾಗುತ್ತದೆ ಎಂಬ ಸಬೂಬನ್ನು ವೈದ್ಯ ದಿಲೀಪ್ ಹೇಳಿದ್ದರು ಎಂದು ವೃದ್ಧೆಯ ಕುಟುಂಬದವರು ದೂರಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರು ದಿಟ್ಟ ನಿರ್ಧಾರ ತೆಗೆದುಕೊಂಡು ನಾಲ್ಕು ದಿನಗಳ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಿದ್ದರು. ತೀವ್ರ ಗಾಯದಿಂದ ಬಳಲಿದ್ದ ಅಜ್ಜಿ ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಶವವನ್ನ ಗುರುನಾಥ ಆಸ್ಪತ್ರೆಗೆ ತಂದು ಕುಟುಂಬ ಸದಸ್ಯರು ಹೋರಾಟ ನಡೆಸಿದ್ರು. ಸಕಾಲಕ್ಕೆ ಬಂದ ಪೊಲೀಸರು ವೈದ್ಯನನ್ನು ರಕ್ಷಣೆ ಮಾಡಿದ್ರು.
ಇದನ್ನೂ ಓದಿ:ಚಾಮರಾಜನಗರ: 8 ಕಿ.ಮೀ ಡೋಲಿಯಲ್ಲಿ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ತಂದ ಗ್ರಾಮಸ್ಥರು
ವೈದ್ಯನ ಎಡವಟ್ಟಿನಿಂದ ತಮ್ಮ ತಾಯಿಯ ಆರೋಗ್ಯ ಹಾಳಾಗಿದೆ ಎಂದು ನಾಲ್ಕು ದಿನಗಳ ಹಿಂದೆಯೇ ಇಲ್ಲಿನ ಬಸವನಗರ ಠಾಣೆಗೆ ಪುತ್ರಿ ದೂರು ನೀಡಿದ್ದರು. ದೂರು ನೀಡಿದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಹೀಗಾಗಿ ವೈದ್ಯನ ವಿರುದ್ಧ ಮತ್ತೊಂದು ದೂರನ್ನು ಸಹ ನೀಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.