ದಾವಣಗೆರೆ : ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ಅಂಶವೊಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣ ಘಟಕದ ಪರೀಕ್ಷಾ ವರದಿಯಿಂದ ಬಹಿರಂಗವಾಗಿದೆ. ಉನ್ನತಮಟ್ಟದ ಹಾಗೂ ಎರಡನೇ ಬಾರಿಗೆ ಪರೀಕ್ಷಿಸಲು ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀರಿನ ಸ್ಯಾಂಪಲ್ ಕಳುಹಿಸಲಾಗಿದ್ದು, ಈ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಸೂಳೆಕೆರೆ ಜ್ಯಾಕ್ ವೆಲ್ಗಳಲ್ಲಿಂದ ಇಲ್ಲಿನ ಹಳ್ಳಿಗಳಿಗೆ ಹಾಗೂ ಚನ್ನಗಿರಿಗೆ ನೀರು ಪೂರೈಕೆಯಾಗುತ್ತಿದೆ. ಈ ಜ್ಯಾಕ್ವೆಲ್ಗಳಲ್ಲಿನ ನೀರಿನ ಬಣ್ಣ ಬದಲಾಗಿದ್ದರಿಂದ ನೀರನ್ನು ಪರೀಕ್ಷಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ನೀರನ್ನು ಸರ್ವೇಕ್ಷಣಾ ಘಟಕದಲ್ಲಿ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಿಂದ ನೀರಿನಲ್ಲಿ ಬ್ಯಾಕ್ಟೀರಿಯಾ ಇದೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಚನ್ನಗಿರಿ ಪುರಸಭೆ ಹಾಗು ಜಿಲ್ಲಾ ಆರೋಗ್ಯ ಇಲಾಖೆ ಚನ್ನಗಿರಿ ಹಾಗು ತಾಲೂಕಿನ ಹಳ್ಳಿಗಳಿಗೆ ಈ ನೀರು ಉಪಯೋಗಸದಂತೆ ಡಂಗೂರ ಸಾರುವ ಮೂಲಕ ಜಾಗ್ರತೆ ಮೂಡಿಸಲಾಗಿದೆ.
ಚನ್ನಗಿರಿ ಪಟ್ಟಣ ಹಾಗೂ ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ : ಈ ಕೆರೆಯನ್ನು ಸ್ವಚ್ಛಗೊಳಿಸುವ ಕಾರಣ ಚನ್ನಗಿರಿ ಪಟ್ಟಣಕ್ಕೆ ಹಾಗು ಹಳ್ಳಿಗಳಿಗೆ ಕೆಲ ದಿನಗಳ ಕಾಲ ಸೂಳೆಕೆರೆ ನೀರು ಪೂರೈಕೆ ಇಲ್ಲ ಎಂದು ಚನ್ನಗಿರಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಿ ಹೇಳಿದ್ದಾರೆ. ಪುರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಪೂರೈಕೆ ಕುರಿತ ತುರ್ತು ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಒಂದು ವಾರದಿಂದ ಕೆಂಪು ಮಿಶ್ರಿತ ನೀರು ಸರಬರಾಜು ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಳೆಕೆರೆ ನೀರು ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ನೀರಿನ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಜಿಲ್ಲಾ ಸರ್ವೇಕ್ಷಣ ನೀರು ತಪಾಸಣಾ ತಂಡ ಕೆರೆಯ ನೀರು ಬಳಕೆಗೆ ಯೋಗ್ಯವಿಲ್ಲ ಎಂದು ವರದಿ ನೀಡಿದೆ.
ಅಷ್ಟೇ ಅಲ್ಲದೆ ಸೂಳೆಕೆರೆಯಿಂದ ಚಿತ್ರದುರ್ಗ ನಗರ, ಹೊಳಲ್ಕೆರೆ, ಚನ್ನಗಿರಿ, ಜಗಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈಗ ನೀರು ಸರಿಯಿಲ್ಲದ ಕಾರಣ ಈ ಭಾಗಗಳಿಗೂ ಕೆಲ ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಸೂಳೆಕೆರೆ ನೀರು ಪೂರೈಕೆ ಕೇಂದ್ರವನ್ನು ಸ್ವಚ್ಛ ಮಾಡಬೇಕು. ಅಲ್ಲಿಯವರೆಗೆ ಹಿರೇಮಳಲಿ ಪಂಪ್ ಹೌಸಿನಿಂದ ಚನ್ನಗಿರಿ ಪಟ್ಟಣಕ್ಕೆ ನೀರು ಪೂರೈಕೆಗೆ ನಿರ್ಧರಿಸಲಾಗಿದೆ. ಚನ್ನಗಿರಿ ಪಟ್ಟಣದ ಇನ್ನು ಕೆಲ ಬಡಾವಣೆಗಳಲ್ಲಿ ಟ್ಯಾಂಕರ್ ಮುಖಾಂತರ ನೀರು ಪೂರೈಸಲಾಗುವುದು ಎಂದು ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಧಿಕಾರಿ ಮಾಹಿತಿ : ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಧಿಕಾರಿ ಡಾ ನಾಗರಾಜ್, ಸೂಳೆಕೆರೆ ಜ್ಯಾಕ್ ವೆಲ್ನಿಂದ ಚನ್ನಗಿರಿ, ಚಿತ್ರದುರ್ಗ ಹಾಗು ಚನ್ನಗಿರಿ ತಾಲೂಕಿನ ಕೆಲ ಹಳ್ಳಿಗಳು ಜೊತೆಗೆ ದಾವಣಗೆರೆಯ ಕೆಲ ಭಾಗಕ್ಕೆ ನೀರು ಪೂರೈಸಲಾಗುತ್ತಿತ್ತು. ನೀರಿನ ಬಣ್ಣ ಬದಲಾಗಿದೆ, ಶುದ್ಧವಾಗಿಲ್ಲ ಎಂದು ಎಂದು ಜನರು ದೂರು ಸಲ್ಲಿಸಿದ್ದರು. ಈ ಸಂಬಂಧ ಸೂಳೆಕೆರೆಯ 06 ಜ್ಯಾಕ್ ವೆಲ್ಗಳ ನೀರನ್ನು ಪರೀಕ್ಷೆ ನಡೆಸಲಾಗಿದ್ದು, 06 ಜ್ಯಾಕ್ ವೆಲ್ಗಳ ಪೈಕಿ 04 ಜ್ಯಾಕ್ ವೆಲ್ಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಈ ಬಗ್ಗೆ ತಕ್ಷಣ ಎಚ್ಚೆತ್ತು ಚನ್ನಗಿರಿ ತಾಲೂಕು ಪಂಚಾಯಿತಿ ಇಒ, ನೀರು ಸರಬರಾಜು ಇಲಾಖೆಯ ಎಇಇಯವರಿಗೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಪೂರೈಕೆಯಾಗಿರುವ ನೀರನ್ನು ಬಳಕೆ ಮಾಡದಂತೆ ಎಂದು ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ ಎಂದು ಹೇಳಿದರು.
ಈ ಸಂಬಂಧ ಗ್ರಾಪಂ ಪಿಡಿಒಗಳ ಗಮನಕ್ಕೆ ತಂದು ಆಯಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎರಡನೇ ಬಾರಿ ಪರೀಕ್ಷಿಸಲು ನೀರಿನ ಸ್ಯಾಂಪಲ್ನ್ನು ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಮೊದಲ ವರದಿಯಲ್ಲಿ ಬ್ಯಾಕ್ಟೀರಿಯಾ ಇದೆ ಎಂದು ತಿಳಿದುಬಂದಿದೆ. ಯಾವ ಬ್ಯಾಕ್ಟೀರಿಯಾ ಇದೆ ಎಂಬ ಬಗ್ಗೆ ತಿಳಿಯಲು ಎರಡನೇ ವರದಿಗಾಗಿ ಕಾಯುತ್ತಿದ್ದೇವೆ. ಇನ್ನು ಈಗಾಗಲೇ ಯಾರದರೂ ನೀರು ಸೇವನೆ ಮಾಡಿದ್ದರೆ ಅಂತವರನ್ನು ವೀಕ್ಷಣೆ ಮಾಡಲು ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸೋಮವಾರ ಕೈ ಸೇರಲಿದೆ ಎರಡನೇ ವರದಿ : ಚನ್ನಗಿರಿ ತಾಲೂಕಿನ ಎಲ್ಲಾ ಆರೋಗ್ಯ ಸಮುದಾಯದ ಅಧಿಕಾರಿಗಳಿಗೆ, ಪ್ರಾಥಮಿಕ ಸುರಕ್ಷಣಾ ಅಧಿಕಾರಿಗಳಿಗೆ ಹಾಗು ಆಶಾ ಕಾರ್ಯಕರ್ತೆಯರಿಗೆ ಆಯಾ ಗ್ರಾಮಗಳಿಗೆ ತೆರಳಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರಾ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಅಲ್ಲದೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ತಿಳಿಸಲಾಗಿದೆ. ಎರಡನೇ ಪರೀಕ್ಷಾ ವರದಿ 48 ಗಂಟೆಗಳ ಬಳಿಕ ಅಂದರೆ ಸೋಮವಾರ ನಮ್ಮ ಕೈ ಸೇರಲಿದೆ ಎಂದು ತಿಳಿಸಿದರು.
ಈ ನೀರಿನಲ್ಲಿರುವುದು ಯಾವ ಬ್ಯಾಕ್ಟೀರಿಯಾ ಎಂದು ತಿಳಿಯಲು ನೀರಿನ ಸ್ಯಾಂಪಲ್ನ್ನು ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಮಹಾ ವಿದ್ಯಾಲಯದ ಮೈಕ್ರೋಬಯಲಾಜಿ ವಿಭಾಗದಲ್ಲಿ ಕಲ್ಚರ್ ಟೆಸ್ಟ್ ಮಾಡಿಸಲಾಗುತ್ತಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಕೆಲ ದಿನಗಳ ಕಾಲ ನೀರು ಪೂರೈಕೆಯನ್ನು ತಡೆ ಹಿಡಿಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂಜಾಗ್ರತೆ ವಹಿಸಿದ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆ : ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನ ಸಾವನ್ನಪ್ಪಿದ್ದ ಘಟನೆಯಿಂದ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಿದೆ.
ಇದನ್ನೂ ಓದಿ : ವಿದ್ಯುತ್ ಪ್ರವಹಿಸಿ ಅಜ್ಜ, ಅಜ್ಜಿ, ಮೊಮ್ಮಗಳು ಸಾವು.. ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್