ದಾವಣಗೆರೆ : ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಆಗಮಿಸಿ ಇಡೀ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಕೈ ನಾಯಕರುಗಳು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದರು.
2023 ರ ಚುನಾವಣೆಗೆ ಐದಾರು ತಿಂಗಳು ಬಾಕಿ ಇರುವಾಗಲೇ ಕೈ ನಾಯಕರು ಬೆಣ್ಣೆ ನಗರಿ ದಾವಣಗೆರೆಯಲ್ಲಿ ತಮ್ಮ ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ 75 ನೇ ಹುಟ್ಟು ಹಬ್ಬದ ಹಿನ್ನೆಲೆ ಶಾಮನೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಗಮಿಸಿದ್ದರು.
ಕುಣಿದು ಕುಪ್ಪಳಿಸಿದ ಸಿದ್ದು ಅಭಿಮಾನಿಗಳು : ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ, 2023 ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಬೇಕು ಎಂದು ಕೈ ನಾಯಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರು ತಬ್ಬಿಕೊಂಡು ನಮ್ಮಿಬ್ಬರ ಮಧ್ಯೆ ಯಾವುದೇ ವೈಮನಸ್ಸಿಲ್ಲ ಎಂದು ಸಾರಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕಾರ್ಯಕ್ರಮದ ಉದ್ದಕ್ಕೂ ಪ್ರದರ್ಶಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರಿಗೆ ಇಂದಿರಾ ಗಾಂಧಿಯ ಕಂಚಿನ ಪುತ್ಥಳಿ ನೀಡಿ ಗೌರವಿಸಿದ್ದು, ಡಿಕೆ ಶಿವಕುಮಾರ್ ಸಿದ್ದರಾಮಯ್ಯರವರಿಗೆ ರಾಮನಗರದ ರೇಷ್ಮೆ ಶಾಲು ಹೊದಿಸಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು.
ಅಮೃತ ಮಹೋತ್ಸವದಲ್ಲಿ ಹತ್ತು ಲಕ್ಷ ಕ್ಕೂ ಅಧಿಕ ಜನರು ಭಾಗಿ: ಇನ್ನು ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಕೆಲವರು ಪಾದಯಾತ್ರೆ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದರೆ, ಇನ್ನು ಕೆಲವರು ಚಕ್ಕಡಿ ಗಾಡಿ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಕಾರ್ಯಕ್ರಮಕ್ಕೆ ಒಟ್ಟು 10 ಲಕ್ಷಕ್ಕೂ ಅಧಿಕ ಜನ ಸೇರಿದ್ದು, ಒಟ್ಟು 4000 ಸಾವಿರ ಬಸ್, 5000 ಕಾರು, 4500 ದ್ವಿಚಕ್ರ ವಾಹನಗಳ ಮೂಲಕ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಹೆಚ್ಚಾದ ವಾಹನ ದಟ್ಟಣೆ : ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಯಿತು. ಟ್ರಾಫಿಕ್ ಜಾಮ್ ನಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ರಾಷ್ಟ್ರೀಯ ಹೆದ್ದಾರಿ 04 ರಲ್ಲಿ ಎಂಟು ಕಿಮೀ ನಡೆದುಕೊಂಡೇ ಕಾರ್ಯಕ್ರಮಕ್ಕೆ ಬಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ ದಟ್ಟಣೆ ಇದ್ದ ಕಾರಣ ರಾಹುಲ್ ಗಾಂಧಿ ಅವರನ್ನು ಪೋಲಿಸರು ಬೇರೆ ಮಾರ್ಗದಿಂದ ಕಾರ್ಯಕ್ರಮಕ್ಕೆ ಕರೆ ತಂದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನು ತಯಾರಿಸಲಾಗಿತ್ತು. ಪ್ರತ್ಯೇಕ ನೂರು ಕೌಂಟರ್ ಗಳನ್ನು ಮಾಡಿ ಮೊಸರನ್ನ, ಬಿಸಿಬೇಳೆ ಬಾತ್, ಮೈಸೂರ್ ಪಾಕ್, ಪಲಾವ್ ಅನ್ನು ಜನರಿಗೆ ನೀಡಲಾಯಿತು.
ಒಟ್ಟಾರೆ ತುಂತುರು ಮಳೆಯ ನಡುವೆಯೂ ಜನ ಕಾತುರದಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಿದರು. ಇನ್ನು ಕೆಲವರು ಛತ್ರಿ ಹಾಗು ಫ್ಲೆಕ್ಸ್ ಆಸರೆಯಲ್ಲಿ ನಿಂತು ಸಿದ್ದರಾಮಯ್ಯ ನವರ ಭಾಷಣವನ್ನು ಕಣ್ತುಂಬಿಕೊಂಡರು.
ಓದಿ : ಬಿಬಿಎಂಪಿಯ 243 ವಾರ್ಡ್ ಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ