ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಮಧ್ಯಾಹ್ನ 12:30ಕ್ಕೆ ಆಗಮಿಸಬೇಕಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2 ಗಂಟೆ ತಡವಾಗಿ ಆಗಮಿಸಿದರು. ಬೆಣ್ಣೆ ನಗರಿಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭಕ್ಕೆ ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಇವರೊಂದಿಗೆ ಆಗಮಿಸಿದರು.
ಕೇವಲ ಶುಭಾಶಯ ಸಲ್ಲಿಕೆಗೆ ಮಾತ್ರ ನಾವು ಸುಮ್ಮನಾಗಬಾರದು : ವೇದಿಕೆ ಮೇಲೆ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಅಭಿನಂದನಾ ಸಮಿತಿ ಪರವಾಗಿ ಗೌರವಿಸಲಾಯಿತು. ದೀಪ ಬೆಳಗುವ ಮೂಲಕ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಇದಾದ ಬಳಿಕ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಈಗಿರುವ ಸರ್ಕಾರ ಸಂವಿಧಾನವನ್ನೇ ದುರ್ಬಲಗೊಳಿಸಲು ಹೊರಟಿದೆ. ಬಿಜೆಪಿಯ ದುರಾಡಳಿತವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಸಿದ್ದರಾಮಯ್ಯರಲ್ಲಿದೆ. ಕೇವಲ ಶುಭಾಶಯ ಸಲ್ಲಿಕೆಗೆ ಮಾತ್ರ ನಾವು ಸುಮ್ಮನಾಗಬಾರದು. ಸಂವಿಧಾನವನ್ನು ಸಂರಕ್ಷಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಭ್ರಷ್ಟಾಚಾರವನ್ನೇ ವ್ಯಾಪಾರವನ್ನಾಗಿಸಿಕೊಂಡ ಸರ್ಕಾರ : ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಜ್ಯದ ಜನತೆಗೆ ನಾವು ನೀಡಿದ 165 ಭರವಸೆಗಳಲ್ಲಿ ಶೇ. ನೂರರಷ್ಟು ಈಡೇರಿಸಿದ್ದೇವೆ. ಆದರೆ, ಇಂದು ಶೇಕಡ 40ರಷ್ಟು ಕಮಿಷನ್ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದ ಜನ ಎರಡು ಸರ್ಕಾರವನ್ನು ತಾಳೆ ಹಾಕಿ ನೋಡುತ್ತಿದ್ದಾರೆ. ಇಂದು ಭ್ರಷ್ಟಾಚಾರವನ್ನೇ ವ್ಯಾಪಾರವನ್ನಾಗಿಸಿಕೊಂಡ ಸರ್ಕಾರದ ಬಗ್ಗೆ ಜನರಿಗೆ ಬೇಸರ ಇದೆ. ಇಂಥ ಸರ್ಕಾರದ ವಿರುದ್ಧ ನಾವು ಹೋರಾಡಬೇಕಿದೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ಶುಭಾಶಯ ಕೋರಿದ ಡಿಕೆಶಿ : ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿದ್ದರಾಮಯ್ಯಗೆ ರೇಷ್ಮೆ ಶಾಲು ಹೊದಿಸಿ ಇಂದಿರಾಗಾಂಧಿ ಅವರ ಪುಸ್ತಕವನ್ನು ಗೌರವಪೂರ್ವವಾಗಿ ನೀಡಿದರು. ಹಾಗೆಯೇ ಈ ವೇಳೆ ಸಿದ್ದರಾಮಯ್ಯರನ್ನ ತಬ್ಬಿಕೊಂಡು ಅಭಿನಂದಿಸಿದರು.
ಬಸವಣ್ಣನವರ ತತ್ವವೇ ಈ ಕಾಂಗ್ರೆಸ್ನ ತತ್ವ : ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲೇ ನಮ್ಮ ನಿಮ್ಮೆಲ್ಲರ ನಾಯಕ ಸಿದ್ದರಾಮಯ್ಯ ಕೂಡ ಜನಿಸಿದ್ದಾರೆ. ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ದೇಶಕ್ಕೂ ಕಾಂಗ್ರೆಸ್ಸಿಗೂ ಹಾಗೂ ಸಿದ್ದರಾಮಯ್ಯನವರಿಗೂ, ನಿಮಗೂ, ನಮಗೂ ಇದು ಸಂಭ್ರಮದ ಕ್ಷಣವಾಗಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ನಾವು ಈ ದೇಶದ ಜನತೆಗೆ ನ್ಯಾಯವನ್ನು ಒದಗಿಸಿ ಕೊಡಬೇಕು. 2013ರ ಬಸವ ಜಯಂತಿಯಂದು ಸಿದ್ದರಾಮಯ್ಯ ತಮ್ಮ ಅಧಿಕಾರ ವಹಿಸಿಕೊಂಡಿದ್ದರು. ಬಸವಣ್ಣನವರ ತತ್ವವೇ ಈ ಕಾಂಗ್ರೆಸ್ನ ತತ್ವವಾಗಿದೆ. ಜನರ ಆಸೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಓಡಾಡಬೇಕೆಂಬುದೇ ಆಗಿದೆ. ಇದರಿಂದಾಗಿ ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನಾವು ಸಂಕಲ್ಪ ತೊಡಬೇಕು ಎಂದು ಶಪಥ ಮಾಡಿದರು.
ಈ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಪ್ರತಿಜ್ಞೆ ಆಗಬೇಕು. ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲಿ ರಾಜ್ಯದ ಜನ ಯಾವತ್ತೂ ಹಸಿವಿನಿಂದ ಬಳಲಬಾರದು ಎಂಬ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರದ್ದು. ಕೇವಲ ವೇದಿಕೆ ಮೇಲಿರುವ ಮುಖಂಡರು ಈ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಎದುರು ಕುಳಿತಿರುವ ಜನ ಈ ಸಂಕಲ್ಪ ತೊಡಬೇಕು ಎಂದು ಸೂಚಿಸಿದರು.
ದಮನಿತರಿಗೆ ಧ್ವನಿ ನೀಡಿದ ನಾಯಕ : ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮಾತನಾಡಿ, ದಲಿತರು ದಮನಿತರಿಗೆ ಧ್ವನಿ ನೀಡಿದ ನಾಯಕ ಸಿದ್ದರಾಮಯ್ಯ. 75ನೇ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಸಕಲ ಸನ್ಮಂಗಳಗಳು ಲಭಿಸಲಿ ಎಂದು ಆಶಿಸುತ್ತೇನೆ. ದೇಶದ ಸಹ 75ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದ್ದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಸಹ 75ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಎಂಟು ವರ್ಷ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಸಹೋದರನಂತೆ ನನ್ನನ್ನು ಜೊತೆಯಲ್ಲಿಟ್ಟುಕೊಂಡು ಬೆಂಬಲ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಹಕಾರ ನೀಡಿದರು ಎಂದು ಹೊಗಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್ ಗಾಂಧಿ ಭರವಸೆ