ದಾವಣಗೆರೆ : ಅತೃಪ್ತರ ನಡೆಗಳ ಬಗ್ಗೆ ತಲೆಬಿಸಿ ಮಾಡಿಕೊಂಡಿರುವ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಬೇಡಿಕೆಯ ಕೂಗು ಕೇಳಲಾರಂಭಿಸಿದೆ. ಹಿರಿಯ ಶಾಸಕ, ವೀರಶೈವ ಲಿಂಗಾಯಿತ ಸಮಾಜದ ಹಿರಿಯ ಶಾಮನೂರು ಶಿವಶಂಕರಪ್ಪರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಾವಣಗೆರೆಯಲ್ಲಿ ಶಾಮನೂರು ಅಭಿಮಾನಿಗಳು ಉಪವಾಸ ಸತ್ಯಾಗ್ರಹಕ್ಕೆ ಇಳಿದಿದ್ದಾರೆ.
ಸ್ಮಾರ್ಟ್ ಸಿಟಿ, ಅಮೃತ ನಗರ ಸೇರಿದಂತೆ ವಿವಿಧ ಬೃಹತ್ ಯೋಜನೆಗಳು ನಗರಕ್ಕೆ ದೊರೆತಿದ್ದರೂ ಕಾಮಗಾರಿಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಅಪರೂಪಕ್ಕೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಬರುತ್ತಾರೆ. ಇದರಿಂದ ಆಧಿಕಾರಿಗಳ ಸಭೆ ನಡೆಸುವವರಿಲ್ಲ, ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಹೀಗಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಎಂದರು. ಈ ಹಿನ್ನೆಲೆಯಲ್ಲಿ ಸ್ವಕ್ಷೇತ್ರದವರಿಗೆ ಸಚಿವ ಸ್ಥಾನ ನೀಡಿ ಎಂಬ ಕೂಗು ಕೇಳಿ ಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಿಲ್ಲೆಯಿಂದ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ದಾವಣಗೆರೆ ದಕ್ಷಿಣದಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಹರಿಹರದಲ್ಲಿ ಎಸ್ ರಾಮಪ್ಪ, ಅಭಿವೃದ್ಧಿಯ ಹರಿಕಾರ ಎಂದೇ ಹೆಸರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಎಂ.ಎಲ್.ಸಿ ಮಾಡಿ, ಈ ಮೂವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.