ದಾವಣಗೆರೆ: ಮತದಾರರ ಪಟ್ಟಿಯಲ್ಲಾಗುತ್ತಿರುವ ಅವ್ಯವಹಾರವು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಆಗುತ್ತಿರುವ ಅವ್ಯವಹಾರ ಕಾನೂನು ವಿರುದ್ಧವಾಗಿರುವಂತದ್ದು. ಇದನ್ನು ಯಾರು ಸರಿ ಎಂದು ಒಪ್ಪಿಕೊಳ್ಳುವುದಿಲ್ಲ. ಚುನಾವಣಾ ಆಯೋಗವು ಸ್ವತಂತ್ರವಾಗಿರುವ ಸಂಸ್ಥೆ. ಹೀಗಿರುವಾಗ ಅಲ್ಲೇ ಅವ್ಯವಹಾರ ನಡೆಯುತ್ತಿದೆ ಎಂದರೆ ಪ್ರಜಾಪ್ರಭುತ್ವದ ಮಟ್ಟ ಎಲ್ಲಿ ಹೋಗುತ್ತಿದೆ ಎಂದು ಊಹಿಸಿ? ಎಂದರು.
ರಾಜಕೀಯದ ಅವಶ್ಯಕತೆ ಈ ಮಟ್ಟಕ್ಕಿದೆ ಅಂದ ಮೇಲೆ ಎಲ್ಲರೂ ರಾಜಕೀಯಕ್ಕೆ ಬರಲು ಉತ್ಸುಕರಾಗಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು ಸೇರಿದಂತೆ ಗೂಂಡಾಗಳು, ರೌಡಿಗಳು ಕೂಡ ರಾಜಕೀಯಕ್ಕೆ ಬರುತ್ತಿದ್ದಾರೆ. ಕಾರಣವಿಷ್ಟೇ ರಾಜಕೀಯದಲ್ಲಿ ಸಿಗುವ ಸಂಪಾದನೆ ಎಲ್ಲೂ ಸಿಗುವುದಿಲ್ಲ ಎಂಬುದು. ಹೀಗಾಗಿ ಈ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂದು ಸಂತೋಷ್ ಹೆಗ್ಡೆ ಪ್ರತಿಪಾದಿಸಿದರು.
ಇನ್ನು ವಿರೋಧ ಪಕ್ಷದವರು, ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಮಾಡುತ್ತಾರೆ. ಈ ಬಗ್ಗೆ ಆಡಳಿತ ಪಕ್ಷದಲ್ಲಿರುವವರನ್ನು ಕೇಳಿದರೆ ಕೇವಲ ಶೇ10ರಷ್ಟು ಮಾತ್ರ ಎಂದು ಹೇಳುತ್ತಾರೆ. ಆನೆ ಕದ್ದವನು ಕಳ್ಳನೇ, ಅಡಕೆ ಕದ್ದವನು ಕಳ್ಳನೇ ಈ ಗಾದೆ ರೀತಿಯಲ್ಲಿ ಇವರಿಬ್ಬರ ಕಥೆಯಾಗಿದೆ. ದುರಾಸೆಗಳಿಗೆ ಮಟ್ಟ ಹಾಕಲು ಎಲ್ಲಿಯೂ ಸಾಧ್ಯವಿಲ್ಲ. ಕೋವಿಡ್ಗೆ, ಕ್ಯಾನ್ಸರ್ಗೆ ಮದ್ದಿದೆ. ಆದರೆ, ದುರಾಸೆ, ಭ್ರಷ್ಟಾಚಾರಕ್ಕೆ ಮದ್ದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ರೌಡಿಗಳು ಪರೇಡ್ ನಡೆಸಲು ಸಜ್ಜಾಗಿದ್ದಾರೆ': ಕಾಂಗ್ರೆಸ್ ಟ್ವೀಟ್