ದಾವಣಗೆರೆ: ಮರ್ಯಾದೆಯಿಂದ ನೆಟ್ಟಗಿರಬೇಕು, ಹುಚ್ಚುಹುಚ್ಚಂಗೆ ಆಡಿದ್ರೆ ಒದ್ದು ಒಳಗೆ ಹಾಕಿ ಬಿಡ್ತಿನಿ, ಅಡ್ಡ ದಾರಿ ಹಿಡಿದು, ಮತ್ತೆ ಮತ್ತೆ ಬಾಲ ಬಿಚ್ಚಿದರೆ ನಿರ್ದಾಕ್ಷಿಣ್ಯವಾಗಿ ಗಡಿಪಾರು ಮಾಡ್ತೇನೆ. ರೌಡಿಶೀಟರ್ಗಳಿಗೆ ದಾವಣಗೆರೆ ಎಸ್ಪಿ ಹನುಮಂತರಾಯ ಕ್ಲಾಸ್ ತೆಗೆದುಕೊಂಡ ಪರಿಯಿದು.
ಗಣೇಶ ಹಬ್ಬ ಮತ್ತು ಮೊಹರಂ ಹಿನ್ನಲೆ ದಾವಣಗೆರೆ ನಗರದ ಡಿಆರ್ಆರ್ ಮೈದಾನದಲ್ಲಿ ರೌಡಿಶೀಡರ್ಗಳ ಪರೇಡ್ ನಡೆಸಿದ ಎಸ್ಪಿ ಹನುಂಮತರಾಯ, ಅಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಖಡಕ್ ಎಚ್ಚರಿಕೆ ನೀಡಿದರು. ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಗಾರ್ ಮಂಜ, ಚಾಕಲೇಟ್ ಸಂತು, ಮಣ್ ನಾಗ, ದೇವರಾಜ, ಸಿದ್ದ, ಹರ್ಷ, ಚೆಸ್ಟ್ ಮಂಜ ಸೇರಿ 283 ಕ್ಕೂ ಹೆಚ್ಚು ರೌಡಿಶೀಟರ್ಗಳಿಗೆ ಎಸ್ಪಿ ಚಳಿ ಬಿಡಿಸಿದರು.
ದಾವಣಗೆರೆ ವಿಭಾಗದ 697 ರೌಡಿಶೀಟರ್ಗಳ ಪೈಕಿ 283 ರೌಡಿಶೀಟರ್ಗಳು ಖುದ್ದಾಗಿ ಹಾಜರಾಗಿದ್ದರು. ಈ ವೇಳೆ ಕುಖ್ಯಾತಿ ಇರುವ ರೌಡಿಗಳನ್ನೆಲ್ಲಾ ಮುಂದಿನ ಸಾಲಿನಲ್ಲಿ ನಿಲ್ಲಿಸಿ ಖಡಕ್ ಎಚ್ಚರಿಕೆ ಎಸ್ಪಿ, ಜೋಡಿ ಕೊಲೆ ಕೇಸ್ನಲ್ಲಿ ಆರೋಪಿಗಳಾಗಿದ್ದ ಚಾಕಲೇಟ್ ಸಂತು ಗ್ಯಾಂಗ್ಗನ್ನು ತರಾಟೆಗೆ ತೆಗೆದುಕೊಂಡರು. ಮರ್ಯಾದೆಯಿಂದ ನೆಟ್ಟಗಿರಬೇಕು, ಹಳೇ ಚಾಳಿ ಮುಂದುವರೆಸಿದ್ರೆ ಕಾನೂನು ಕ್ರಮ ಕೈಗೊಳ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಪದೇ ಪದೇ ಬಾಲ ಬಿಚ್ಚುತ್ತಿದ್ದ ಗಾರ್ ಮಂಜ, ಹರ್ಷ, ಪ್ರದಿ, ಸಂತು, ನೂರ್, ದೇವ ಇನ್ನಿತರೆ ರೌಡಿಶೀಟರ್ ಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದು, ಸರ್ಕಾರದಿಂದ ಸೌಲಭ್ಯ ಸಿಗಲ್ಲ, ಪಾಸ್ ಪೋರ್ಟ್, ನೌಕರಿ ಯಾವುದೂ ಸಿಗಲ್ಲ. ತಿಳಿದೊ, ತಿಳಿಯದನೋ ತಪ್ಪು ಮಾಡಿದ್ದೀರಿ. ತಪ್ಪುಗಳನ್ನು ಸುಧಾರಿಸಿಕೊಳ್ಳಲು ಅವಕಾಶ ಇರುತ್ತದೆ. ಹಳೇ ಚಾಳಿ ಮುಂದುವರೆಸದೇ ಒಳ್ಳೆಯ ದಾರಿ ಹಿಡಿಯಿರಿ. ಮತ್ತೆ ಬಾಲ ಬಿಚ್ಚಿದರೆ, ನಾವು ಬೇರೆ ಅಸ್ತ್ರಗಳನ್ನು ಪ್ರಯೋಗಿಸಬೇಕಾಗುತ್ತೆ ಎಂದು ವಾರ್ನಿಂಗ್ ನೀಡಿದರು.