ದಾವಣಗೆರೆ: ನಗರದ ಹೃದಯ ಭಾಗದ ಅಶೋಕ್ ರಸ್ತೆಯಲ್ಲಿರುವ ರೈಲ್ವೆ ಗೇಟ್ನಿಂದ ಜನರು ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಶಕಗಳಿಂದ ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ.
ಸಂಸದ ಜಿ. ಎಂ. ಸಿದ್ದೇಶ್ವರ್ ಅವರು ಕೇಂದ್ರ ಸಚಿವರನ್ನು ಈ ರೈಲ್ವೆ ಗೇಟ್ನಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳಕ್ಕೆ ಕರೆತಂತು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವ ಮಾತುಗಳನ್ನು ಸುರೇಶ್ ಅಂಗಡಿ ಆಡಿದ್ದು, ಬೆಣ್ಣೆನಗರಿ ಮಂದಿಗೆ ಇದು ಖುಷಿ ತಂದಿದೆ.
ಅಶೋಕ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ಇನ್ನು ಜಗಳೂರು ಭಾಗದಿಂದ ಬರುವ ವಾಹನಗಳು ಇದೇ ಮಾರ್ಗದಲ್ಲಿಯೇ ದಾವಣಗೆರೆಗೆ ಬರಬೇಕು. ಹಲವು ದಶಕಗಳಿಂದಲೂ ಈ ರೈಲ್ವೆ ಹಳಿಗೆ ಪರ್ಯಾಯವಾಗಿ ಮೇಲ್ಸೇತುವೆ ಇಲ್ಲವೇ ಅಂಡರ್ ಪಾಸ್ ಆಗಬೇಕೆಂಬ ಬೇಡಿಕೆ ಇತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಅಲ್ಲದೆ, ದಾವಣಗೆರೆ ರೈಲ್ವೆ ನಿಲ್ದಾಣವನ್ನು ಸುಂದರ ನಿಲ್ದಾಣವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಣ್ಣಪುಟ್ಟ ಏನೇ ಸಮಸ್ಯೆಗಳಿದ್ದರೂ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.