ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮೇ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೇ 17 ರಿಂದ 19 ರ ಮಧ್ಯ ರಾತ್ರಿಯವರೆಗೆ ದಾವಣಗೆರೆ ಜಿಲ್ಲಾದ್ಯಂತ ಷರತ್ತು ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಈ ನಿಷೇಧಾಜ್ಞೆ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ 19 ರ ಶುಶ್ರೂಷಾ ಉದ್ದೇಶ, ಶಾಸನಬದ್ದ ಹಾಗೂ ನಿಯಂತ್ರಣ ಕಾರ್ಯ ಹೊರತುಪಡಿಸಿ ಐವರಿಗಿಂತ ಹೆಚ್ಚಿನ ಜನರ ಒಗ್ಗೂಡುವಿಕೆ ನಿಷೇಧಿಸಲಾಗಿದೆ.
ಎಲ್ಲ ಧರ್ಮಗಳ ಪ್ರಾರ್ಥನ ಮಂದಿರಗಳಲ್ಲಿ ಒಗ್ಗೂಡುವಿಕೆ ಮತ್ತು ಹಬ್ಬದ ಹೆಸರಿನಲ್ಲಿ ಒಂದೆಡೆ ಸೇರುವಂತಿಲ್ಲ. ಈ ಅವಧಿಯಲ್ಲಿ 65 ವರ್ಷ ಮೇಲ್ಪಟ್ಟವರು, ಮಾನಸಿಕ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭೀಣಿಯರು, 10 ವರ್ಷದೊಳಗಿನ ಮಕ್ಕಳು ಆರೋಗ್ಯಕ್ಕೆ ಸಂಬಂಧಿತ ಚಿಕಿತ್ಸೆ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವಂತಿಲ್ಲ. ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಚಲನ ವಲನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಕಂಟೇನ್‍ಮೆಂಟ್ ಝೋನ್‍ಗೆ ಡಿಸಿ ಭೇಟಿ, ಪರಿಶೀಲನೆ
ಕೊರೊನಾ ಸೋಂಕಿತರು ಹೆಚ್ಚಿರುವ ಜಾಲಿನಗರ ಕಂಟೇನ್‍ಮೆಂಟ್ ಝೋನ್‍ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ, ಜಾಲಿನಗರ ಇನ್ಸಿಡೆಂಟ್ ಕಮಾಂಡರ್ ಹಾಗೂ ದೂಡಾ ಆಯುಕ್ತ ಕುಮಾರಸ್ವಾಮಿ, ಡಿಹೆಚ್‍ಒ ಡಾ.ರಾಘವೇಂದ್ರ ಸ್ವಾಮಿ, ಇತರ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.