ಹರಿಹರ: ಮುಂದಿನ ಅಧಿವೇಶನದಲ್ಲಿ ವಾಲ್ಮೀಕಿ ಸಮಾಜದ ಮೀಸಲಾತಿ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ನಡೆದ ರಾಜ್ಯ ಮಟ್ಟದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಈಗಾಗಲೇ ಹಲವು ದಶಕಗಳಿಂದ ಸಂವಿಧಾನ ಬದ್ಧವಾದ ಮೀಸಲಾತಿ ಬೇಡಿಕೆಗಾಗಿ ಪಾದಯಾತ್ರೆ ಸೇರಿದಂತೆ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. ಆಳುವ ಸರ್ಕಾರಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಸಮಾಜದ ಬಂಧುಗಳ ಭಾವನೆಯೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಶೇ 7.5 ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಅಧಿಕಾರ ಹಿಡಿದು ಒಂದು ವರ್ಷ ಕಳೆದರೂ ಇದರ ಬಗ್ಗೆ ಚಕಾರವೆತ್ತದೆ, ಜಾಣ ಕಿವುಡುತನ ತೊರುತ್ತಿರುವುದು ಸರಿಯಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಮಾಜದ ಶೇ 80ರಷ್ಟು ಮತಗಳನ್ನು ನೀಡಿದ ಪರಿಣಾಮ, ನಿಮ್ಮ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ ಎಂದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದು ತಪ್ಪು. ಅಧಿಕಾರ ಇಟ್ಟುಕೊಂಡೆ, ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು. ಕಳೆದ 40 ವರ್ಷಗಳಿಂದ ಮೀಸಲಾತಿಯಲ್ಲಿ ಹೆಚ್ಚಳವಾಗಬೇಕು ಎನ್ನುವ ಕೂಗಿಗೆ ಹಿಂದಿನ ಸಮ್ಮಿಶ್ರ ಸರ್ಕಾರ ಆಯೋಗವನ್ನು ರಚಿಸಿತ್ತು. ಈ ಆಯೋಗ ಈಗಾಗಲೇ ವರದಿಯನ್ನು ನೀಡಿದೆ. ಸರ್ಕಾರ ಕೂಡಲೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುರಪುರ ಶಾಸಕ ರಾಜೂಗೌಡ ಮಾತನಾಡಿ, ವಿಶ್ವದಲ್ಲಿ ಮಹಾಮಾರಿ ಕೊರೊನಾ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಈ ರೀತಿಯಲ್ಲಿ ಜನ ಸೇರಿಸಿ ಸಭೆ ನಡೆಸುವುದು ಸೂಕ್ತವಲ್ಲ. ಮೀಸಲಾತಿ ಅಡಿಯಲ್ಲಿ ಗೆದ್ದಿರುವ ನಾವುಗಳು ಸಮಾಜಕ್ಕೆ ಬೇಕಾದ ಮೀಸಲಾತಿಯನ್ನು ಕೊಡಿಸುವ ಬಗ್ಗೆ ಅಧಿವೇಶನದ ಸಂದರ್ಭದಲ್ಲಿ ಹೋರಾಟ ಮಾಡುತ್ತೇವೆ. ಇದರಲ್ಲಿ ವಿಫಲರಾದರೆ ಶ್ರೀಗಳ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಬಳ್ಳಾರಿ ಸಂಸದ ದೇವೆಂದ್ರಪ್ಪ, ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ರಘುಮೂರ್ತಿ, ತುಕಾರಾಂ, ಅನಿಲ್ ಚಿಕ್ಕಮಾದು, ಕಂಪ್ಲಿ ಗಣೇಶ್, ವೆಂಕಟಪ್ಪ ನಾಯ್ಕ, ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಹಾಗೂ ಮುಖಂಡರು ಇದ್ದರು.