ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೊಸ ಸಿನಿಮಾ ಪೋಸ್ಟರ್ಗೆ ಅಧಿಕಾರಿಗಳು ಮುಖಕ್ಕೆ ಬಿಳಿ ಹಾಳೆ ಅಂಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಅವರ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ರಾಘವೇಂದ್ರ ಸ್ಟೋರ್ ಸಿನಿಮಾ ಬಿಡುಗಡೆಗೊಂಡು ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ಮುಟ್ಟಿದೆ. ಇಂದು ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ ಚಿತ್ರವನ್ನು ಸ್ಥಗಿತಗೊಳಿಸುವಂತೆ ಹಾಗೂ ಪೋಸ್ಟರ್‌ಗಳನ್ನು ಮುಚ್ಚುವಂತೆ ಕಾಂಗ್ರೆಸ್ ಪಕ್ಷದಿಂದ ಸಿ-ವಿಜಿಲ್ ನಲ್ಲಿ ದೂರು ಸಲ್ಲಿಸಲಾಗಿತ್ತು. ಈ ದೂರಿನನ್ವಯ ಬಿಜೆಪಿಯಿಂದ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸದೆ ಪೋಸ್ಟರ್ಗಳಲ್ಲಿ ಅವರ ಮುಖವನ್ನು ಮರೆಮಾಚಲಾಗಿದೆ.
ಗೀತಾಂಜಲಿ ಚಿತ್ರಮಂದಿರದಲ್ಲಿ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ರು. ಸಿನಿಮಾ ಮಂದಿರದ ಬಳಿಯ ಕಟೌಟ್ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಚಿತ್ರಮಂದಿರಕ್ಕೆ ತೆರಳಿ ಅಧಿಕಾರಿಗಳು ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧವನ್ನು ಮಾಡಿಲ್ಲ.
ಇದನ್ನೂ ಓದಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ
ಕಟೌಟ್ ಮುಚ್ಚಿದ ಎಫ್ಎಸ್ಟಿ ತಂಡ : ಎಫ್ಎಸ್ಟಿ ತಂಡ ಭೇಟಿ ನೀಡಿ ಚಿತ್ರಮಂದಿರದ ಹೊರಭಾಗದಲ್ಲಿದ್ದ ಕಟೌಟ್‌ಗಳ ಮುಖಮರೆ ಮಾಚಿದ್ರು. ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ ಹಾಗೂ ಮೌಖಿಕವಾಗಿಯೂ ಕೂಡ ಪ್ರದರ್ಶನದ ಕುರಿತು ಮಾತನಾಡಿಲ್ಲ ಎಂದು ಎಸ್ಎಸ್ಟಿ ಅಧಿಕಾರಿಗಳು ವರದಿ ನೀಡಿದ್ದಾರೆ. ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧವನ್ನು ಚುನಾವಣಾಧಿಕಾರಿ ಕಚೇರಿಯಿಂದ ವಿಧಿಸಿಲ್ಲ ಎಂದು ಈ ಮೂಲಕ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿವ ಡಾ ಸುಧಾಕರ್ ಪರ ಹಾಸ್ಯ ನಟ ಬ್ರಹ್ಮಾನಂದಂ, ಪ್ರೇಮ್, ಅನು ಪ್ರಭಾಕರ್ ಮತಬೇಟೆ