ಹರಿಹರ: ಅರ್ಧಕ್ಕೆ ನಿಂತಿರುವ ನಗರದ ರಾಜಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ ಮಾಡಲು ಅನುದಾನ ನೀಡುತ್ತೇನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಭರವಸೆ ನೀಡಿದರು.
ನಗರಕ್ಕೆ ಶುಕ್ರವಾರ ಆಗಮಿಸಿದ್ದ ಸಂಸದರು, ಶಿವಮೊಗ್ಗ ರಸ್ತೆಯಲ್ಲಿರುವ ರಾಜಕಾಲುವೆ ಸಮೀಪ ಹಳ್ಳದ ಮೇಲೆ ಮಾರುಕಟ್ಟೆ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಪರೀಶಿಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮಾತ್ರ ನಾವು ರಾಜಕೀಯ ಮಾಡುತ್ತೇವೆ ವಿನಾ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸುವುದಿಲ್ಲ. ನಗರದ ರಾಘವೇಂದ್ರ ಮಠದ ಸಮೀಪ ನಡೆಯುತ್ತಿರುವ ರಸ್ತೆ ಕಾಮಗಾರಿಯು ಹಲವು ಗೊಂದಲಗಳಿಂದ ಸ್ಥಗಿತಗೊಂಡಿದ್ದು, ಸೌಹಾರ್ದಯುತವಾಗಿ ಬಗೆಹರಿಸಿ ರಸ್ತೆ ಮಧ್ಯದಿಂದ 60 ಅಡಿ ಗುರುತಿಸಿ ಕಾಮಗಾರಿ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ರಾಜಕಾರಣಿಯಾದವರು ಯಾರನ್ನೋ ಓಲೈಸಲು ಕಾಮಗಾರಿಗಳನ್ನು ಮಾಡಬಾರದು. ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡಿದಾಗ ಮಾತ್ರ ಮತದಾರರೇ ನಮಗೆ ನಿರಂತರ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.