ದಾವಣಗೆರೆ: ಪುಟ್ಟ ಕಂದಮ್ಮವೊಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಹೈರಾಣಾಗಿರುವ ತಾಯಿ ಮಗುವನ್ನು ಉಳಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾಳೆ.

ಜಿಲ್ಲೆಯ ಹರಿಹರ ತಾಲೂಕಿನ ನಿವಾಸಿ ಚಂದ್ರಿಕಾ ಎಂಬುವರ ಋಷಿತಾ ಎಂಬ ಪುಟ್ಟ ಕಂದಮ್ಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ. ಮಗುವಿನ ಹೃದಯದಲ್ಲಿ ಮೂರು ರಂಧ್ರಗಳಿದ್ದು, ವೈದ್ಯರು ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕೆಂದು ಹೇಳಿದ್ದಾರೆ. ಇದಕ್ಕೆ 7 ರಿಂದ 8 ಲಕ್ಷ ರೂ. ಖರ್ಚಾಗುತ್ತದೆ. ಆದರೆ ಸರ್ಜರಿಗೆ ಹಣ ಭರಿಸಲು ಬಡ ತಾಯಿ ಚಂದ್ರಿಕಾಗೆ ಸಾಧ್ಯವಾಗುತ್ತಿಲ್ಲ. ಇದರಿಂದ ತಾಯಿ ಕಳವಳಕ್ಕೀಡಾಗಿದ್ದಾಳೆ.
ಈ ಮೊದಲು ಚಂದ್ರಿಕಾ ಅವರು ಮಗುವಿಗೆ ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕೆಲದಿನಗಳ ಹಿಂದೆ ಹಣ ಇಲ್ಲದೆ ಇವರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿರುವ ಘಟನೆ ಕೂಡ ನಡೆದಿದೆ. ಇದರಿಂದ ನೊಂದ ತಾಯಿ ಇದೀಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು, ತನ್ನ ಮಗುವಿನ ಹೃದಯದಲ್ಲಿ ರಂಧ್ರಗಳಿವೆ, ಅದಕ್ಕೆ ಚಿಕಿತ್ಸೆ ನೀಡಲು ಲಕ್ಷಗಟ್ಟಲೇ ಹಣದ ಅವಶ್ಯಕತೆ ಇದ್ದು, ನಿಮ್ಮ ಕೈಲಾದ ಸಹಾಯ ಮಾಡಬೇಕೆಂದು ಅಂಗಲಾಚಿದ್ದಾರೆ.