ದಾವಣಗೆರೆ: ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ಶಾಸಕರೆಲ್ಲರೂ ಸೇರಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆ ಸಲ್ಲಿಸಿದ್ದೇವೆ, ನನಗೆ ಮಂತ್ರಿಸ್ಥಾನ ನೀಡಿದರೆ ನಿಭಾಯಿಸುವೆ ಎಂದು ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯಲಿದೆ. ಜಿಲ್ಲೆಯ ಐವರೂ ಶಾಸಕರು ಒಟ್ಟಾಗಿ ಸಿಎಂ ಅವರನ್ನು ಭೇಟಿ ಆಗಿದ್ದೆವು, ಜಿಲ್ಲೆಗೊಂದು ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಐವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.
ಸಚಿವ ಸ್ಥಾನ ಸಿಕ್ಕರೆ ನಿಭಾಯಿಸುವೆ: ನಾನು ಸಚಿವ ಸ್ಥಾನ ಕೇಳಿಲ್ಲ, 3 ಬಾರಿ ಶಾಸಕನಾದ ಅನುಭವವಿದೆ, ಕ್ಯಾಬಿನೆಟ್ ಸ್ಥಾನಮಾನದ 2 ನಿಗಮಗಳ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ವರಿಷ್ಠರು ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಇದ್ದು, ಮುಂತ್ರಿ ಸ್ಥಾನಕ್ಕಾಗಿ ಯಾವುದೇ ಲಾಬಿ, ಒತ್ತಡ ತಂತ್ರ ಅನುಸರಿಸಲ್ಲ ಎಂದರು.
ನಮ್ಮ ತಾಲೂಕಿಗೆ ನೀರು ಬಂದರೆ ಅದೇ ಶಾಶ್ವತ ಸಚಿವ ಸ್ಥಾನ ಸಿಕ್ಕಂತೆ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದ್ದು, ಪಕ್ಷ ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾಂಪ್ ಸಿಎಂ ಅಲ್ಲವೇ ಅಲ್ಲ: ಬಸವರಾಜ್ ಬೊಮ್ಮಾಯಿ ಬುದ್ಧಿವಂತರು, ಅನುಭವಸ್ಥರು, ಸದನ ಕಲಾಪದ ವೇಳೆ ಹಲವು ಚರ್ಚೆಗಳಲ್ಲಿ ಸಮರ್ಥವಾಗಿ ಉತ್ತರಿಸಿದ್ದಾರೆ. ಖಂಡಿತವಾಗಿ ಅವರು ಒಳ್ಳೆಯ ಆಡಳಿತ ನೀಡುತ್ತಾರೆ ಎಂದು ಶಾಸಕ ಎಸ್.ವಿ. ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿಕುಮಾರ್ಗೆ ಸಚಿವ ಸ್ಥಾನ ನೀಡಿ
ವಿಧಾನ ಪರಿಷತ್ ಸದಸ್ಯ ಎಸ್. ರವಿಕುಮಾರ್ಗೆ ಸಚಿವ ಸ್ಥಾನ ನೀಡುವಂತೆ ಗಂಗಾಮತಸ್ಥ ಸಮುದಾಯದಿಂದ ಒತ್ತಾಯ ಕೇಳಿ ಬಂದಿದೆ. ಇಡಿ ರಾಜ್ಯದಲ್ಲಿ ಗಂಗಾಮಸ್ಥರಲ್ಲಿ ಅವರೊಬ್ಬರೇ ರಾಜಕಾರಣಿ ಇರುವುದು. ಮೇಲಾಗಿ ಸಂಘ ಪರಿವಾರದ ಹಿನ್ನೆಲೆ ಇರುವ ವ್ಯಕ್ತಿಯಾಗಿದ್ದಾರೆ. ಆದ ಕಾರಣ ಅವರಿಗೆ ಸಚಿವ ಸ್ಥಾನ ನೀಡಿ ಎಂದು ದಾವಣಗೆರೆ ಗಂಗಾಮತ ಜಿಲ್ಲಾ ಘಟಕದಿಂದ ಆಗ್ರಹಿಸಲಾಯಿತು.
ಇನ್ನು ರವಿಕುಮಾರ್ ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದ ನಿವಾಸಿಯಾಗಿದ್ದು, ಎಬಿವಿಪಿ ಸೇರಿದಂತೆ ಸಂಘ ಪರಿವಾರದ ಹಲವಾರ ಶಾಖೆಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಮೇಲಾಗಿ ಪ್ರಮಾಣಿಕರಾಗಿದ್ದು, ಇಂತಹ ಹಿಂದುಳಿದ ಜನಾಂಗದ ವ್ಯಕ್ತಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಹಾನಗಲ್ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.