ದಾವಣಗೆರೆ : ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ವೀಕೆಂಡ್ ಕರ್ಪ್ಯೂ ವಿಧಿಸಲಾಗಿದೆ. ಆದ್ರೆ, ಜಗಳೂರು ಬಿಜೆಪಿ ಶಾಸಕ ಎಸ್ವಿ ರಾಮಚಂದ್ರಪ್ಪ ಅವರು ಇದನ್ನು ಉಲ್ಲಂಘಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಈ ಮೂಲಕ ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರು ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಶಾಸಕರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದರು. ಅಲ್ಲದೇ ದಾವಣಗೆರೆಯ ಕೆಬಿ ಬಡಾವಣೆಯಲ್ಲಿರುವ ಅವರ ನಿವಾಸದ ಮುಂದೆ ಬೃಹತ್ ಪೆಂಡಾಲ್ ಹಾಕಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ಮನೆ ಮುಂಭಾಗ ಹಲವು ಇಲಾಖೆ ಅಧಿಕಾರಿಗಳು ಶುಭಾಶಯ ಕೋರಲು ಜಮಾಯಿಸಿದ್ದರು.
ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪೊಲೀಸರು ಭಾಗಿ : ಪೊಲೀಸ್ ಅಧಿಕಾರಿಗಳು ಸಹ ಶಾಸಕರ ಹುಟ್ಟು ಹಬ್ಬಕ್ಕೆ ಶುಭಕೋರಲು ಆಗಮಿಸಿದ್ದರು. ಜನರ ಮೇಲೆ ದಬ್ಬಾಳಿಕೆ ಮಾಡಿ ಅಂಗಡಿಗಳನ್ನು ಮುಚ್ಚಿಸುವ ಪೊಲೀಸರು ಸಹ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಪೊಲೀಸರ ಕಣ್ಣೆದುರೇ ನಿಯಮಾವಳಿ ಉಲ್ಲಂಘನೆ ಆಗುತ್ತಿದ್ದರೂ, ಕೆಲ ಪೊಲೀಸರು ಕಣ್ಮುಚ್ಚಿಕೊಂಡು ಕುಳಿತಿದ್ದರು.
ಇದನ್ನೂ ಓದಿ: ಬೆಳಗಾವಿ: ಮೂವರು ಕಂದಮ್ಮಗಳನ್ನು ಬಲಿ ಪಡೆದ ರೂಬೆಲ್ಲಾ ಚುಚ್ಚುಮದ್ದು
ಶಾಸಕ ರೇಣುಕಾಚಾರ್ಯರಿಂದ ಕೊರೊನಾ ನಿಯಮ ಉಲ್ಲಂಘನೆ : ವೀಕೆಂಡ್ ಕರ್ಪ್ಯೂ ಕೇವಲ ಜನಸಾಮಾನ್ಯರಿಗೆ ಮಾತ್ರನಾ ಎಂಬ ಅನುಮಾನ ಇದೀಗ ಕಾಡುತ್ತಿದೆ. ಜಗಳೂರು ಕ್ಷೇತ್ರದ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಇತ್ತ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ದಾವಣಗೆರೆಯ ಹೊನ್ನಾಳಿಯ ಬಳ್ಳೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಭಾಗಿಯಾಗಿದ್ರು. ನೂರಾರು ಕಾರ್ಯಕರ್ತರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.