ದಾವಣಗೆರೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ಕೇಸ್. ಏನೋ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ, ಆದರೆ ಏನೂ ಇರಲ್ಲ, ಟುಸ್ ಗಿರಾಕಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರಿಗೆ ಇಡಿಯವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಇಡಿ ಕೆಲಸ ಇಡಿ ಮಾಡುತ್ತೆ. ಅವರು ನೋಟಿಸ್ ಕೊಡ್ತಾ ಇರ್ತಾರೆ. ತನಿಖೆ ಮಾಡ್ತಾ ಇರ್ತಾರೆ. ಆದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿ ಡಿ.ಕೆ.ಶಿವಕುಮಾರ್ ವರ್ತಿಸುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಬ್ರಾಹ್ಮಣ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವ ಜಾತಿಯವರಾದ್ರೂ ಸಿಎಂ ಆಗಬಹುದು. ಶಾಸಕಾಂಗದಲ್ಲಿ ಶಾಸಕರ ಬೆಂಬಲ ಇದ್ದವರು ಮುಖ್ಯಮಂತ್ರಿ ಆಗಬಹುದು. ನಮ್ಮದು ಜಾತ್ಯಾತೀತ ರಾಷ್ಟ್ರ. ಜನಬೆಂಬಲ ಇರಬೇಕು ಅಷ್ಟೇ ಎಂದರು.
ಹೆಚ್.ಡಿ.ಕುಮಾರಸ್ವಾಮಿಯವರು ಲಿಂಗಾಯತರಲ್ಲಿ, ಒಕ್ಕಲಿಗರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸುವುದು ಅವರ ಸಂಸ್ಕೃತಿ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊಡೆದಾಡುತ್ತಿದ್ದಾರೆ. ಈ ರೀತಿಯ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಚುನಾವಣೆ ಆದ ಮೇಲೆ ಪಕ್ಷದ ವರಿಷ್ಠರು ಕುಳಿತು ಯಾರು ಮುಖ್ಯಮಂತ್ರಿ ಅಂತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಟಾಂಗ್ : ದೊಡ್ಡ ದೊಡ್ಡ ನಾಯಕರು ಪಕ್ಷ ಕಟ್ಟಿ ಏನ್ ಆದ್ರು ಎಂಬುದು ಗೊತ್ತಿದೆ. ಆ ಹೊಸ ಪಕ್ಷ ಏನ್ ಆದ್ವು ಎಂಬುದು ಕೂಡಾ ಜನರಿಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರು ನೂತನ ಪಕ್ಷ ಕಟ್ಟಿದ ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಟಾಂಗ್ ಕೊಟ್ಟರು.
ರಾಜನಹಳ್ಳಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೆಡ್ಡಿಯವರು ನಲ್ವತ್ತು ಸ್ಥಾನ ಗೆಲ್ಲುತ್ತೇವೆ ಅಂತಾರೆ, ಅದು ಅಷ್ಟು ಸುಲಭವಲ್ಲ. ಚುನಾವಣೆಗೆ ಬಹಳ ದಿನ ಇಲ್ಲ. ಇನ್ನು ಎರಡೂವರೆ ತಿಂಗಳಿದೆ ಅಷ್ಟೇ. ರೆಡ್ಡಿಯವರು ಎಷ್ಟು ಸ್ಥಾನ ಗೆಲ್ತಾರೆ ನೋಡೋಣ. ಇದು ಆಗುವ ಕೆಲಸ ಅಲ್ಲ. ಕೇಂದ್ರ ರಾಜ್ಯ ಸರ್ಕಾರ ನೀಡಿದ ಯೋಜನೆಗಳಿಂದ ಜನ ನಮ್ಮ ಪರವಾಗಿದ್ದಾರೆ. ಆದರೆ ಏಕಾಏಕಿ ಹೊಸ ಪಕ್ಷ ಮಾಡಿದ್ರೆ ಜನ ಹೆಂಗ್ ಕೇಳ್ತಾರೆ ಎಂದು ಹೇಳಿದರು.
ಇದನ್ನೂ ಓದಿ: 'ನಾಳೇನಾಗುತ್ತೆ ಅಂತಾ ಭಗವಂತನಿಗಿಂತಲೂ ಮೊದಲೇ ಕುಮಾರಸ್ವಾಮಿಗೆ ಗೊತ್ತಾಗುತ್ತೆ': ಸಿ.ಸಿ.ಪಾಟೀಲ್ ವ್ಯಂಗ್ಯ