ದಾವಣಗೆರೆ: ಕಲುಷಿತ ನೀರು ಸೇವಿಸಿ ರಾಯಚೂರಿನಲ್ಲಿ ಆರಕ್ಕೂ ಹೆಚ್ಚು ಜನ ಮೃತಪಟ್ಟಿರುವ ಕಹಿ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಅದೇ ಕಲುಷಿತ ನೀರು ಸೇವಿಸಿ ಮತ್ತೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ರಮೇಶ್ (25) ಸಾವನ್ನಪ್ಪಿದ ಯುವಕ. ಗ್ರಾಮದಲ್ಲಿ ಕುಡಿಯುವ ನೀರನ್ನು ಪೂರೈಸುವ ಪೈಪ್ ಒಡೆದು ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆ ನೀರನ್ನೇ ಗ್ರಾಮಸ್ಥರು ಸೇವಿಸಿದ್ದಾರೆ.
ಪರಿಣಾಮ ಕಾನನಕಟ್ಟೆ ಗ್ರಾಮದ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದಾರೆ. ಇನ್ನು ಮಾಹಿತಿ ತಿಳಿದ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಕಾನನಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತ ರಮೇಶ್ ದೇಹವನ್ನು ಪರೀಕ್ಷಿಸಿದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಜ್ವರ ನಿಯಂತ್ರಣಕ್ಕೆ ಬಾರದ ಕಾರಣ ಜಗಳೂರು ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಯುವಕ ರಮೇಶ್ ಮೃತಪಟ್ಟಿದ್ದಾನೆ.
ಕಲುಷಿತ ನೀರು ಕುಡಿದ ಹಿನ್ನಲೆ ಯುವಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ತನ್ನ ಮಗನನ್ನು ಕಳೆದುಕೊಂಡ ರಮೇಶ್ನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಓದಿ: ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ