ದಾವಣಗೆರೆ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಿದರೆ ಒಳಿತು ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ರಾಜೀನಾಮೆ ನೀಡಿರುವುದರಿಂದ ಗಾಂಧಿ ಕುಟುಂಬದವರು ಅಧ್ಯಕ್ಷರಾಗುವ ಸಾಧ್ಯತೆ ಕಡಿಮೆ. ಪಕ್ಷ ಮುನ್ನಡೆಸುವ ಪ್ರಮುಖ ಜವಾಬ್ದಾರಿ ಇದ್ದು, ಇಂಥ ಪರಿಸ್ಥಿತಿಯಲ್ಲಿ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿಸಿದರೆ ಪಕ್ಷಕ್ಕೆ ಬಲ ಬರುತ್ತದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನೆಡೆ ಉಂಟಾಗಿದೆ. ರಾಹುಲ್ ಆಯ್ಕೆ ವಿಚಾರ ಬಂದಾಗ ಗಾಂಧಿ ಕುಟುಂಬದವರು ಇರಬೇಕು ಅಂತೇನೂ ಇರಲಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ದರೆ ಪಕ್ಷದಲ್ಲಿ ಒಗ್ಗಟ್ಟು ಇರುತ್ತದೆ. ಪಕ್ಷ ಸಂಘಟನೆ ಬಿಟ್ಟು ಬೇರೆ ವಿಚಾರಕ್ಕೆ ಬರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ರಾಹುಲ್ ಅಧ್ಯಕ್ಷರಾಗಬೇಕು ಎಂಬ ಮನವಿ ಮಾಡಲಾಗಿತ್ತು. ಆದ್ರೆ, ಈಗ ನೈತಿಕ ವಿಚಾರದಲ್ಲಿ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಮುಂದುವರಿದರೆ ಸಂತೋಷ ಆಗುತ್ತದೆ ಎಂದರು.
ಬಿಜೆಪಿಯವರು ಒಳ್ಳೆಯ ಮಂತ್ರ ಹೇಳ್ತಾರೆ. ಆದ್ರೆ, ಬಗಲಲ್ಲೇ ಚೂರಿ ಇಟ್ಟುಕೊಂಡು ಓಡಾಡುತ್ತಾರೆ. ಇದು ಬಿಜೆಪಿಯ ಪರಂಪರೆ ಆಗಿಬಿಟ್ಟಿದೆ. ನಮ್ಮ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿ ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಅನೈತಿಕತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರ್ಜೆಂಟಾಗಿ ಮುಖ್ಯಮಂತ್ರಿಯಾಗಲು ಹೊರಟಿದ್ದರೂ ಅದು ಆಗಲ್ಲ. ಬಿಜೆಪಿ ಹೈಕಮಾಂಡ್ ಪರ್ಯಾಯ ಸರ್ಕಾರ ರಚಿಸಲು ಮನಸ್ಸು ಮಾಡಿಲ್ಲ. ಬೇರೆಯದ್ದೇ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.