ದಾವಣಗೆರೆ : ಹಿಂದೂತ್ವದ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ಪಿಯುಸಿ ಓದುವ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಅವರು ಮಾತನಾಡಿದರು. ರಾಮಮಂದಿರ ರಥ ಯಾತ್ರೆಯಿಂದ ಸಂಪೂರ್ಣ ಬಿಜೆಪಿಯಲ್ಲಿ ತೊಡಗಿಸಿಕೊಂಡೆ. ದೇಶದಲ್ಲಿ ಹಿಂದೂತ್ವ ರಕ್ಷಣೆ ಮಾಡಿದ್ದೇ ಆರ್‌ಎಸ್‌ಎಸ್ ಎಂದು ತಿಳಿಸಿದರು.
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ..
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಪ್ರಯತ್ನಿಸುತ್ತಿದ್ದಾರೆ. ಅವರ ಮತಗಳನ್ನು ಪಡೆಯಲು ಹೆಚ್ಡಿಕೆ, ಸಿದ್ದರಾಮಯ್ಯ ಸ್ಪರ್ಧೆಗೆ ಇಳಿದು ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಅದೆಷ್ಟೋ ಮುಸ್ಲಿಮರು ಜೈ ಶ್ರೀರಾಮ್ ಎಂದು ಹೇಳುವ ವಿಡಿಯೋಗಳು ನನ್ನ ಕಡೆ ಇವೆ. ಪಾಕಿಸ್ತಾನದಲ್ಲಿ ಹಿಂದೂತ್ವದ ಬಗ್ಗೆ ಮಾತನಾಡಿದ್ರೆ ಕೊಚ್ಚಿ ಹಾಕ್ತಾರೆ. ಆದ್ರೆ, ನಮ್ಮ ಪ್ರತಿಪಕ್ಷದ ನಾಯಕರು ಹಾಗೂ ಹೆಚ್ಡಿಕೆ ಹಿಂದೂತ್ವದ ವಿರೋಧಿಯಾಗಿ ಅಲ್ಪಸಂಖ್ಯಾತರ ಓಲೈಸುವ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿಎಸ್‌ವೈ ಅವರನ್ನು ಯಾರೂ ಸೈಡ್ಲೈನ್ ಮಾಡಿಲ್ಲ!
ಮಾಜಿ ಸಿಎಂ ಬಿಎಸ್‌ವೈ ಅವರನ್ನು ಯಾರೂ ಸೈಡ್ಲೈನ್ ಮಾಡಿಲ್ಲ. ಮಾಡುವ ಪ್ರಶ್ನೆಯೂ ಇಲ್ಲ. ಉಪಚುನಾವಣೆಯಲ್ಲಿ ಬಿಎಸ್‌ವೈ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ಪಕ್ಷವಾಗಲಿ, ವರಿಷ್ಠರಾಗಲಿ ಸೈಡ್ಲೈನ್ ಮಾಡಿಲ್ಲ. ಬಿಎಸ್‌ವೈ ಅವಧಿಯಲ್ಲಿ ಬೊಮ್ಮಾಯಿ ಭ್ರಷ್ಟಾಚಾರ ಮಾಡಿದ್ರು ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರತಿಪಕ್ಷದ ನಾಯಕರಿಗೆ ವಿರೋಧಿಸಲು ಯಾವುದೇ ವಿಷಯಗಳಿಲ್ಲ.
ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಆಂಜನೇಯ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳಿದ್ದವು. ಅದರಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇತ್ತು ಎಂದು ಹೇಳಬಹುದಾ?. ಸಿದ್ದರಾಮಯ್ಯ ಟಿಪ್ಪು ಜಯಂತಿ ಜಾರಿಗೊಳಿಸಿದರು. ಅದು ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಮನದಟ್ಟಾಗಿದೆ ಎಂದರು.
ಮುಂದಿನ ಸಿಎಂ ಬೊಮ್ಮಾಯಿಯವರೇ!
2023ರ ವಿಧಾನಸಭೆ ಚುನಾವಣೆ ನೇತೃತ್ವ ಸಿಎಂ ಬೊಮ್ಮಾಯಿ ವಹಿಸಲಿದ್ದಾರೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ನೇತೃತ್ವ ಅಂದರೆ ಅರ್ಥ ಮುಂದಿನ ಸಿಎಂ ಎಂಬುದೇ ಆಗಿದೆ. ಕಳೆದ ಬಾರಿ ಬಿಎಸ್‌ವೈ ಚುನಾವಣೆ ನೇತೃತ್ವ ವಹಿಸಿದ್ದರು.
ಅವರೇ ಸಿಎಂ ಆದರು. ಈಗಲೂ ಹಾಗೇ ಚುನಾವಣೆ ನೇತೃತ್ವ ವಹಿಸಿದವರೇ ಸಿಎಂ, ಬಸವರಾಜ ಬೊಮ್ಮಾಯಿ ಮುಂದಿನ ಸಿಎಂ ಆಗ್ತಾರೆ. ಸುಧಾಕರ್ ಹಾಗೂ ನನ್ನ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.
ಓದಿ: ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ನಿಂದ ಸಿಎಂಗೆ ಲೀಗಲ್ ನೋಟಿಸ್: ಕಾರಣ?