ದಾವಣಗೆರೆ; ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.6.37 ಇರುವ ಕಾರಣ ಜೂ.21 ರ ಬೆಳಗ್ಗೆ 6 ಗಂಟೆಯಿಂದ ಜುಲೈ 5 ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಲಾಕ್ ಡೌನ್ಗೆ ಸಂಬಂಧಿಸಿದಂತ ಸಭೆ ಬಳಿಕ ಮಾತನಾಡಿದ ಅವರು, ಶುಕ್ರವಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.6.37 ರಷ್ಟಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಶೇ.5 ರೊಳಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ಹೊಸ ನಿಬಂಧನೆಗಳನ್ವಯ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸರ್ಕಾರದ ಆದೇಶದಂತೆ ಬಿಡುಗಡೆ ಮಾಡಿದ್ದು, ಜುಲೈ 5ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆದರೆ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿರುವ ಹಿನ್ನೆಲೆ ಸದರಿ ವಾಹನಗಳು ಸರಕುಗಳನ್ನು ರಶೀದಿಯಲ್ಲಿ ನಮೂದಿತ ವಿಳಾಸದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನಪೂರ್ತಿ ಅವಕಾಶ ನೀಡಲಾಗಿದೆ.
ಕೃಷಿ, ಗೊಬ್ಬರ, ಹಾಗು ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳು ಸಾಗಣೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರ ತನಕ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಮದುವೆಯಲ್ಲಿ ಗರಿಷ್ಠ 40 ಜನ ಹಾಗು ಅಂತ್ಯಕ್ರಿಯೆಯಲ್ಲಿ ಐದು ಜನ್ರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.
ಹೋಟೆಲ್, ರೆಸ್ಟೋರೆಂಟ್‍ಗಳು, ಉಪಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿಸಲಾಗಿದೆ. ಯಾವುದೇ ರೀತಿಯ ಪಾರ್ಸಲ್ ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.