ಹರಿಹರ: ಕೇಂದ್ರ ಸರ್ಕಾರ ಜಾರಿಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಲಿ, ಮಾಜಿ ಶಾಸಕರು ಭಾಗವಹಿಸಿ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ, ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲ ರಾಮಚಂದ್ರ ಕಲಾಲ್, ಕೆಲವು ದಿನಗಳ ಹಿಂದೆ ಮೋದಿ ಸರ್ಕಾರ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ದೇಶದಲ್ಲಿ ಧರ್ಮದ ವಿಷ ಬೀಜ ಬಿತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದರೆ ದೇಶದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
1955ರಲ್ಲಿ ಜಾರಿಯಾದ ಪೌರತ್ವ ಕಾಯ್ದೆಯು 1950ಕ್ಕಿಂತಲೂ ಮೊದಲು ಭಾರತಕ್ಕೆ ಬಂದಿರುವವರು ಯಾರೇ ಆದರೂ ಅವರು ಭಾರತದ ಪ್ರಜೆ ಎಂದು ಘೋಷಿಸಿತ್ತು. ಪೌರತ್ವದ ವಿಷಯ ಕೆದಕಿದರೆ ರಾಜಕೀಯ ಲಾಭ ಆಗುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಬಿಜೆಪಿ, ಈಗ ಪೌರತ್ವ ತಿದ್ದುಪಡಿ ಹಾಗೂ ಎನ್‌ಆರ್‌ಸಿಗೆ ಕೈ ಹಾಕಿದೆ. ರಾಜಕೀಯ ಲಾಭಕ್ಕಾಗಿ ದೇಶವನ್ನೇ ಇಬ್ಭಾಗ ಮಾಡಬಹುದಾದ ಸಿಎಎ ಮತ್ತು ಎನ್‌ಆರ್‌ಸಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ 1985 ಅಸ್ಸೋಂ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ. ಅಸ್ಸೋಂ ಒಳಗೊಂಡಂತೆ ಈಶಾನ್ಯ ಭಾಗದ ಸಪ್ತ ಸಹೋದರಿ ರಾಜ್ಯಗಳಲ್ಲಿ ಸಿಎಎಗೆ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಿಎಎ ವಿರುದ್ಧದ ಹೋರಾಟದಲ್ಲಿ ಅಮೂಲ್ಯ ಜೀವಹಾನಿ, ಸಾರ್ವಜನಿಕ ಆಸ್ತಿ ಹಾನಿಯಾಗಿವೆ. ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಈ ಕಾಯ್ದೆಯನ್ನು ತೆಗೆದುಹಾಕಬೇಕು. ಮೋದಿ ದೇಶದ ಪ್ರಧಾನಿ ಎಂಬುದನ್ನು ಮರೆತು ಕೇವಲ ಹಿಂದೂ ಧರ್ಮದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಎಲ್ಲಾ ಧರ್ಮ, ಜಾತಿಯವರು ಸೇರಿ ಹೋರಾಟ ಮಾಡಿದ ಫಲವಾಗಿ ಬ್ರಿಟಿಷರು ದೇಶಬಿಟ್ಟು ತೊಲಗಿದ್ದಾರೆ. ಅಂದು ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದಂತೆ ಇಂದು ಮೋದಿ ಮುಸಲ್ಮಾನರನ್ನು ದೇಶ ಬಿಟ್ಟು ಓಡಿಸುತ್ತಿದ್ದಾರೆ. ಮೋದಿ ಅವರು ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ಉಂಟು ಮಾಡುವಂತಹ ಕಾಯ್ದೆಗಳ ಬದಲಿಗೆ ಜನರ ನೈಜ ಸಮಸ್ಯೆ ದೂರ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.