ದಾವಣಗೆರೆ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾಗೋಷ್ಠಿಗೆ ಆಗಮಿಸುವ ಮುನ್ನ ಮಾಸ್ಕ್ ಧರಿಸದೇ ಬಂದ ಘಟನೆ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದಿದೆ. ಈ ವೇಳೆ ಸಾಮಾಜಿಕ ಅಂತರವೂ ಮಾಯವಾಗಿತ್ತು.
ರಾಜ್ಯ ಸರ್ಕಾರದ ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಕಾರಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಂದರು. ಕಾರಿನಿಂದ ಇಳಿದ ಶಾಸಕಿ ಮಾಸ್ಕ್ ಧರಿಸದೇ ಕಾಂಗ್ರೆಸ್ ಕಚೇರಿಯವರೆಗೆ ಆಗಮಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಸ್ವಾಗತಿಸುವ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ.
ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಾಧ್ಯಮಗೋಷ್ಠಿಗೆ ಆಗಮಿಸಿದ್ದ ಕೈ ನಾಯಕರು, ಮಹಿಳಾ ನಾಯಕಿಯರು ಸಹ ಯಾವುದೇ ಕೋವಿಡ್ ಮಾರ್ಗಸೂಚಿ ಪಾಲಿಸಲಿಲ್ಲ. ಹಿರಿಯ ಮುಖಂಡರಾದ ಕೆ. ಹೆಚ್. ಮುನಿಯಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಆಗಮಿಸಿದಾಗಲೂ ಇದೇ ಚಿತ್ರಣ ಕಂಡು ಬಂತು.