ದಾವಣಗೆರೆ : ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆಯು ಡಾಗ್ ಸ್ಕ್ವಾಡ್ ಬಳಕೆ ಮಾಡುತ್ತದೆ. ಈ ಶ್ವಾನಗಳು ನಿಷ್ಠೆಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತವೆ. ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಸಮೀಪ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸ್ ಶ್ವಾನ 'ದಾವಣಗೆರೆ ಲೇಡಿ ಸಿಂಗಮ್' ಜನಪ್ರಿಯತೆಯ ತಾರಾ ಯಶಸ್ವಿಯಾಗಿದ್ದಾಳೆ. ಘಟನೆ ನಡೆದ ಸ್ಥಳದಿಂದ 8 ಕಿ.ಮೀ ದೂರ ಕ್ರಮಿಸಿದ ತಾರಾ ಅಪರಾಧಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರಿಗೆ ಸಾಥ್ ನೀಡಿದ್ದಾಳೆ.
ದಾವಣಗೆರೆಯಲ್ಲಿ ಕಳ್ಳರಿಗೆ ಸಿಂಹಸ್ವಪ್ನವಾಗಿದ್ದ ಶ್ವಾನ ತುಂಗಾ ಪೊಲೀಸ್ ಇಲಾಖೆಯನ್ನು ಅಗಲಿ ಒಂದು ವರ್ಷ ಉರುಳಿದೆ. ಇಲಾಖೆ ಭೇದಿಸಲು ಕಷ್ಟ ಎಂದು ಪರಿಗಣಿಸಿದ್ದ ಪ್ರಕರಣಗಳನ್ನು ಈ ಶ್ವಾನ ಭೇದಿಸಿದ್ದಳು. ಇದೀಗ ತುಂಗಾಳ ಸ್ಥಾನವನ್ನು ತಾರಾ ತುಂಬಿದ್ದಾಳೆ.
ಬೆಂಗಳೂರಿನ ಆಡುಗೋಡಿಯಲ್ಲಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕೇವಲ ಆರು ತಿಂಗಳು ತರಬೇತಿ ಪಡೆದಿರುವ ತಾರಾ, ದಾವಣಗೆರೆಗೆ ಪಾದಾರ್ಪಣೆ ಮಾಡಿದ ಕೇವಲ ಎರಡೇ ತಿಂಗಳಲ್ಲಿ ಕೊಲೆಗಡುಕನನ್ನು ಬಂಧಿಸಲು ಪೊಲೀಸರಿಗೆ ನೆರವಾಗಿದ್ದಾಳೆ.
ತಾರಾ ಚುರುಕಿನ ಶ್ವಾನ. ದಾವಣಗೆರೆ ಡಿ.ಆರ್.ಪೊಲೀಸರ ನಿರ್ದೇಶನವನ್ನು ಚಾಚೂತಪ್ಪದೆ ಕೇಳುತ್ತಾಳೆ. ಇಲಾಖೆಗೆ ಬಂದ ಎರಡೇ ತಿಂಗಳಲ್ಲಿ ಮೂರಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದ ಕೀರ್ತಿ ಇವಳದ್ದು. ಒಂದು ಗಂಟೆಗೆ 30 ರಿಂದ 40 ಕಿ.ಮೀ ಕ್ರಮಿಸುವ ಈ ಶ್ವಾನವನ್ನು ದಾವಣಗೆರೆಯ ಖಾಸಗಿ ಬಸ್ ಮಾಲೀಕರೊಬ್ಬರು ದಾವಣಗೆರೆ ಪೊಲೀಸ್ ಇಲಾಖೆಗೆ ಉಡುಗೊರೆಯಾಗಿ ಕೊಟ್ಟಿದ್ದರು. ಬೆಲ್ಜಿಯಂ ಮೆನೋಲೀಸ್ಸ್ ತಳಿಗೆ ಸೇರಿದ ಶ್ವಾನ ಇದೀಗ ಪೊಲೀಸರ ಅಚ್ಚುಮೆಚ್ಚಿನ ಶ್ವಾನ.
ಎಸ್ಪಿ ಡಾ.ಕೆ.ಅರುಣ್ ಪ್ರತಿಕ್ರಿಯಿಸಿ, ''ಆಗಸ್ಟ್ 07ರಂದು ನರಸಿಂಹ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ನಮ್ಮ ಡಾಗ್ ಸ್ಕ್ವಾಡ್‌ನ ತಾರಾ 8 ಕಿ.ಮೀ ಓಡಿ ರಾಮನಗರದಲ್ಲಿರುವ ಆರೋಪಿ ಮನೆ ತಲುಪಿದ್ದಳು. ಶ್ವಾನವನ್ನು ಹಿಂಬಾಲಿಸಿದ ಸಿಬ್ಬಂದಿಗೆ ಆರೋಪಿ ಶಿವಯೋಗಿಶ್ ಆ ಮನೆಯಲ್ಲಿಯೇ ವಾಸವಿದ್ದನೆಂದು ತಿಳಿದು ಬಂತು. ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ನರಸಿಂಹನನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈ ಪ್ರಕರಣ ಪತ್ತೆ ಹಚ್ಚುವಲ್ಲಿ ತಾರಾ ಪ್ರಮುಖ ಪಾತ್ರವಹಿಸಿದ್ದಾಳೆ'' ಎಂದು ಮಾಹಿತಿ ನೀಡಿದರು.
ಸಿಪಿಐ ಡಿ.ಆರ್.ಸೋಮಶೇಖರ್ ಮಾತನಾಡಿ, ''ಶ್ವಾನ ತಾರಾ ಇಲಾಖೆಗೆ ಬಂದು ಒಂಭತ್ತು ತಿಂಗಳಾಗಿದೆ. ಈಗಾಗಲೇ 14 ಪ್ರಕರಣಗಳನ್ನು ಅಟೆಂಡ್ ಮಾಡಿದ್ದು, ಎರಡು ಪ್ರಕರಣಗಳ ಸುಳಿವು ನೀಡಿದೆ. ಒಂದು ಕೊಲೆ ಪ್ರಕರಣ ಭೇದಿಸಿದೆ. ಹೀಗಾಗಿ ಮೃತಪಟ್ಟಿರುವ ಶ್ವಾನ ತುಂಗಾಳ ಸ್ಥಾನ ತುಂಬಿದೆ. ಕೊಲೆ ಪ್ರಕರಣ ಬಗೆಹರಿಸಲು ಮಲ್ಲಶೆಟ್ಟಿ ಹಳ್ಳಿಯಿಂದ ರಾಮನಗರಕ್ಕೆ (8 ಕಿ.ಮೀ) ತೆರಳಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇದೊಂದು ಉತ್ತಮವಾದ ಶ್ವಾನ ತಳಿ. ಈ ಹಿಂದಿನ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಈ ಶ್ವಾನವನ್ನು ಆಯ್ಕೆ ಮಾಡಿದ್ದರು'' ಎಂದರು.
ಶ್ವಾನದ ವಿಶೇಷತೆ: ಶ್ವಾನ ತಾರಾಳ ಪಾಲಕರಾದ ಪೊಲೀಸ್ ಕಾನ್ಸ್ಟೇಬಲ್ ಪ್ರಕಾಶ್ ಮಾತನಾಡುತ್ತಾ, ''ಇದು ಮೆಲೋನೀಸ್ ಜಾತಿಗೆ ಸೇರಿದ ವಿಶೇಷ ಶ್ವಾನ. ಬೆಲ್ಜಿಯಂ ದೇಶದಲ್ಲಿ ಈ ಶ್ವಾನವನ್ನು ದನ ಹಾಗೂ ಕುರಿ ಕಾಯಲು ಉಪಯೋಗಿಸಲಾಗುತ್ತಿತ್ತು. ಅಲ್ಲಿನ ಮಲೀನ್ಸ್ ನಗರದಲ್ಲಿ ಈ ತಳಿಯನ್ನು ಅಭಿವೃದ್ಧಿ ಮಾಡಲಾಗಿದ್ದರಿಂದ ಮೆಲೋನೀಸ್ ನಗರದ ಹೆಸರನ್ನೇ ಬೆಲ್ಜಿಯಂ ಮೆನೋಲೀಸ್ ಎಂದು ಶ್ವಾನಕ್ಕಿಡಲಾಗಿತ್ತು. ವಿಶೇಷವಾಗಿ, ತೋಳ ಹಾಗು ನರಿಯ ಜೀನ್ಸ್ನಿಂದ ಉತ್ಪತ್ತಿಯಾಗಿದೆ. ಅತಿ ಹೆಚ್ಚು ಅಮೆರಿಕದಲ್ಲಿ ಬಳಕೆ ಮಾಡಲಾಗುತ್ತಿದೆ. ಭಾರತ ಸರ್ಕಾರ ಇಂಡಿಯನ್ ಆರ್ಮಿಯಲ್ಲಿಯೂ ಇದನ್ನು ಬಳಕೆ ಮಾಡಿದೆ. 2018ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಈ ಶ್ವಾನವನ್ನು ಬಳಸುತ್ತಿದ್ದು, ಬಾಂಬ್ ಹಾಗೂ ಗಾಂಜಾ ಪ್ರಕರಣಗಳ ಬೇಧಿಸಲು ನೆರವಾಗುತ್ತಿದೆ. ಮೈಸೂರು, ಬೆಂಗಳೂರು ಬಿಟ್ಟರೆ ಈ ತಳಿಯ 3ನೇ ಶ್ವಾನ ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹೆಚ್ಚಿದ ತಾಪಮಾನ, ಬಳ್ಳಾರಿಯಲ್ಲಿ ಪೊಲೀಸ್ ಶ್ವಾನಗಳಿಗೆ ವಿಶೇಷ ಆರೈಕೆ