ದಾವಣಗೆರೆ: ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಸಾಬೀತಾದ ಬೆನ್ನಲ್ಲೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬುವನಿಗೆ 15 ವರ್ಷ ಸಜೆ ಹಾಗೂ 26 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದರಿಂದ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ.
ಪ್ರಕರಣ ಹಿನ್ನೆಲೆ:
ನೊಂದ ಯುವತಿಯ ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋದಾಗ ವೀರೇಶ್ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಗರ್ಭಿಣಿಯಾದ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ ವಿರೇಶ್ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ. ಆಗ ದಿಕ್ಕು ತೋಚದ ಸಂತ್ರಸ್ತೆಯ ಕುಟುಂಬ ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಕಲಂ 376, 420, 506ರಡಿ ಒಟ್ಟು 15 ವರ್ಷ ಸಜೆ ಹಾಗೂ 26 ಸಾವಿರ ದಂಡ ಪಾವತಿಸುವಂತೆ ಸೂಚಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಒಟ್ಟಾರೆ 1 ವರ್ಷ 7 ತಿಂಗಳು ಹೆಚ್ಚುವರಿಯಾಗಿ ಸೆರೆವಾಸ ವಿಧಿಸಿ ಆದೇಶ ಹೊರಡಿಸಿದರು.
ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಪಿರ್ಯಾದುದಾರರಿಗೆ ಪರಿಹಾರವಾಗಿ ಕೊಡಬೇಕೆಂದು ಉಳಿದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿ ಈ ಕೇಸ್ನ ವಕಾಲತ್ತು ವಹಿಸಿ ನೊಂದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಿದ್ದಾರೆ.