ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂದು ನನಗೇನೂ ಗೊತ್ತಿಲ್ಲ. ಮಲ್ಲಿಕಾರ್ಜುನ್ಗೆ ಕೇಳಿ. ಆತನೇ ಹೇಳುತ್ತಾನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನಂತೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಬೆಂಗಳೂರಿಗೆ ಮಲ್ಲಿಕಾರ್ಜುನ ಹೋಗಿ ಬಂದಿದ್ದಾನೆ. ಈ ಬಗ್ಗೆ ಅವರನ್ನೆ ಕೇಳಿ ಎಂದು ದಾವಣಗೆರೆ ಲೋಕಸಭೆ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಶಾಮನೂರು ಶಿವಶಂಕರಪ್ಪ ಮಾತನಾಡಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಸ್ಪರ್ಧಿಸ್ತಾರಾ ಅಥವಾ ಇಲ್ಲವೋ ಎಂಬ ಬಗ್ಗೆ ನನಗೆ ಏನು ಗೊತ್ತಿಲ್ಲ. ಈ ಸಂಬಂಧ ನನ್ನನ್ನು ಕಾಂಗ್ರೆಸ್ನ ಯಾವ ನಾಯಕರೂ ಸಂಪರ್ಕಿಸಿಲ್ಲ. ನಾನು ಸಹ ಸಂಪರ್ಕಿಸುವ ಗೋಜಿಗೆ ಹೋಗಿಲ್ಲ ಎಂದಿದ್ದಾರೆ.
ಶಾಮನೂರು ಶಿವಶಂಕರಪ್ಪರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿತ್ತಾದರೂ ವಯಸ್ಸಾಗಿದೆ ಎಂಬ ನೆಪವೊಡ್ಡಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದ ಬೇಸರ ಇನ್ನೂ ಮನದಲ್ಲಿರುವ ಕಾರಣದಿಂದ ತಿರಸ್ಕರಿಸಿದ್ದರು. ಆದ್ರೆ, ಶಾಮನೂರು ಪುತ್ರ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದೇ ಹೇಳಲಾಗಿತ್ತಾದರೂ ಶಿವಶಂಕರಪ್ಪ ನನಗೇನೂ ಗೊತ್ತಿಲ್ಲ ಎಂಬ ಹೇಳಿಕೆ ಈಗ ಮತ್ತೆ ಕುತೂಹಲ ಮೂಡಿಸಿದೆ.