ದಾವಣಗೆರೆ : ಇಲ್ಲಿನ ರೈಲ್ವೆ ನಿಲ್ದಾಣ ಹಲವು ವರ್ಷಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿತ್ತು. ದಶಕಗಳ ಹಿಂದಿನ ಜನರ ಬೇಡಿಕೆ ಇದೀಗ ಈಡೇರಿದೆ. ರೈಲ್ವೆ ನಿಲ್ದಾಣ ಹೈಟೆಕ್ ಸ್ಪರ್ಶ ಪಡೆದಿದೆ.
ಸಂಸದ ಜಿ ಎಂ ಸಿದ್ದೇಶ್ವರ್ ಅವರ ಅವಧಿಯಲ್ಲೀಗ ರೈಲ್ವೆ ನಿಲ್ದಾಣದಕ್ಕೆ ಹೊಸ ರೂಪ ನೀಡಲಾಗಿದೆ. ಸತತ ಒಂದು ವರ್ಷಗಳ ನಿರಂತರ ಪರಿಶ್ರಮದಿಂದ ನಿಲ್ದಾಣವೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ.
ಈ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಐ ಲವ್ ದಾವಣಗೆರೆ ಎಂಬ ಆಕರ್ಷಕ ಬರಹಗಳು ಸ್ವಾಗತಿಸುತ್ತಿವೆ. ಸ್ವಚ್ಛಂದವಾಗಿ 100 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದ್ದು, ನಿಲ್ದಾಣಕ್ಕೆ ಹೊಸ ಚೈತನ್ಯ ನೀಡಿದೆ.
ಇನ್ನು, ನಿಲ್ದಾಣದೊಳಗೆ ವಿಮಾನ ನಿಲ್ದಾಣ ಮಾದರಿಯ ಟಿಕೆಟ್ ಬುಕ್ಕಿಂಗ್ ಕೌಂಟರ್, ವಿಐಪಿ ಲಾಂಚ್, ಪ್ರಯಾಣಿಕರ ವಿಶ್ರಾಂತಿ ಗೃಹ, ಮಹಿಳೆಯರ ನಿರೀಕ್ಷಣಾ ಕೊಠಡಿ, ಎಕ್ಸ್‌ಲೇಟರ್ ಅಳವಡಿಸಲಾಗಿದೆ.
ಅಂದಾಜು 20 ಕೋಟಿ ರೂ. ಅನುದಾನದಲ್ಲಿ ಈ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗಿದೆ. ಕೊರೊನಾ ಸಂಕಷ್ಟಕ್ಕೂ ಮುನ್ನ ಈ ನಿಲ್ದಾಣದ ಮೂಲಕ ನಿತ್ಯವೂ, ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲು ಸೇರಿ ಕನಿಷ್ಠ 44 ರೈಲುಗಳು ಸಂಚರಿಸುತ್ತಿದ್ದವು. ಪ್ರಸ್ತುತ 22 ರೈಲು ಸಂಚರಿಸುತ್ತಿದ್ದವು. ಉದ್ಘಾಟನೆಯ ನಂತರ 36 ರೈಲುಗಳು ಸಂಚರಿಸುವ ನಿರೀಕ್ಷೆ ಇದೆ.
ಈ ನಿಲ್ದಾಣದ ಮೂಲಕ ನಿತ್ಯವೂ 9 ರಿಂದ 10 ಸಾವಿರ ಪ್ರಯಾಣಿಕರು ಸಂಚರಿಸಲಿದ್ದಾರೆ. ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ ಈ ನಿಲ್ದಾಣ ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಮೂಡಿಸಲಿದೆ.
ಇದೀಗ ಈ ನಿಲ್ದಾಣದ ನಾಮಕರಣಕ್ಕೆ ಹಲವು ಹೆಸರುಗಳು ಕೇಳಿ ಬಂದಿವೆ. ಆದರೆ, ಈವರೆಗೂ ಯಾವುದೇ ಹೆಸರು ಫೈನಲ್ ಆಗಿಲ್ಲ. ದಾವಣಗೆರೆಯಲ್ಲಿರುವ ಗ್ಲಾಸ್ಹೌಸ್ ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದು ಪ್ರವಾಸಿಗರನ್ನು ಸೆಳೆಯುತ್ತಿದೆ.
ಇದೇ ಮಾದರಿ ರೈಲ್ವೆ ನಿಲ್ದಾಣವೂ ಹೈಟೆಕ್ ತಂತ್ರಜ್ಞಾನದೊಂದಿಗೆ ಮರು ನಿರ್ಮಾಣಗೊಂಡಿದೆ. ಇದೂ ಸಹಾ ದಾವಣಗೆರೆಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗುವ ಎಲ್ಲಾ ನಿರೀಕ್ಷೆ ಹುಟ್ಟು ಹಾಕಿದೆ.
ಇದನ್ನೂ ಓದಿ: ರಾಯಣ್ಣನ ಪುತ್ಥಳಿ ಅನಾವರಣಕ್ಕೆ ಸಿದ್ದರಾಮಯ್ಯ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು: ಮುಂದೇನಾಯ್ತು?