ಹರಿಹರ:(ದಾವಣಗೆರೆ): ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಐತಿಹಾಸಿಕ ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯದ ಬಾಗಿಲಿಗೆ ಬೀಗ ಹಾಕಿ ಭಕ್ತರ ದರ್ಶನವನ್ನು ನಿಷೇಧಿಸಲಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹರಿಹರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿಯ ದರ್ಶನಕ್ಕೆ ಪ್ರತಿ ನಿತ್ಯವೂ ವಿವಿಧ ಊರು, ರಾಜ್ಯಗಳಿಂದ ನೂರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಮುಜರಾಯಿ ಇಲಾಖೆ ಸರ್ಕಾರದ ಆದೇಶದಂತೆ ದೇವಾಲಯದ ದ್ವಾರ ಬಾಗಿಲು ಮುಚ್ಚಲು ಕ್ರಮ ಕೈಗೊಂಡಿದೆ.
ಶನಿವಾರ ಬೆಳಿಗ್ಗೆ ಅರ್ಚಕರು ಪೂಜೆಯ ನಂತರ ದೇವಸ್ಥಾನದ ಬಾಗಿಲು ಹಾಕಿದ್ದು, ಆದರೆ ಪ್ರತಿನಿತ್ಯ ಶ್ರೀ ಹರಿಹರೇಶ್ವರ ಸ್ವಾಮಿಗೆ ನಡೆಯುವ ಪೂಜಾ ಕಾರ್ಯಗಳು ಮಾತ್ರ ನಿರಂತರವಾಗಿ ನಡೆಯಲಿವೆ ಎಂದು ತಿಳಿದುಬಂದಿದೆ.