ಹರಿಹರ: ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹೀಗಾಗಿ ಹಕ್ಕಿಗಳನ್ನು ನೋಡಿದರೆ ಹೆದರುತ್ತಿರುವ ಜನ, ಹರಿಹರ ನಗರದ ದೊಡ್ಡಿ ಬೀದಿಯ ಗರಡಿ ಮನೆ ವೃತ್ತದ ಕಣದಸಾಲಿನ ಮರಗಳಲ್ಲಿ ವಾಸವಾಗಿರುವ ಬೆಳ್ಳಕ್ಕಿಗಳ ಕಾಟ ನಿವಾರಿಸಬೇಕೆಂದು ಆಗ್ರಹಿಸಿದ್ದಾರೆ.
ತಾಲೂಕಿನ ಬನ್ನಿಕೋಡು, ದೊಗ್ಗಳ್ಳಿ ಗ್ರಾಮ ಸೇರಿದಂತೆ ವಿವಿಧೆಡೆ ಕೋಳಿ ಫಾರಂಗಳಲ್ಲಿನ ಸಹಸ್ರಾರು ಕೋಳಿಗಳು ಹಕ್ಕಿಜ್ವರದಿಂದ ಸಾವಿಗೀಡಾಗಿರುವ ವಿಷಯ ದೃಢಪಟ್ಟಿದೆ. ಈ ಜ್ವರ ಇತರೆ ಪಕ್ಷಿಗಳಿಗೂ ಬರುವ ಅಪಾಯವಿದೆ ಎನ್ನಲಾಗಿದೆ.
ಗರಡಿ ಮನೆ ವೃತ್ತದ ಕಣದ ಸಾಲಿನ ನಾಲ್ಕು ಹಳೆ ಮರಗಳಲ್ಲಿ ಬೆಳ್ಳಕ್ಕಿ ಹಾಗೂ ಕಪ್ಪು ಬಣ್ಣದ ನೂರಾರು ಹಕ್ಕಿಗಳು ವಾಸವಿವೆ. ಇವು ಇಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ನದಿಯಿಂದ ಬೇಟೆಯಾಡಿದ ಮೀನು, ಇತರೆ ಜಲಚರಗಳನ್ನು ಅರ್ಧ ತಿಂದು ಬಿಸಾಕುತ್ತವೆ. ಅಲ್ಲದೆ ಈ ಪಕ್ಷಿಗಳ ಮಲಮೂತ್ರ ಪರಿಸರದಲ್ಲಿ ಬಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದ ಈ ಭಾಗದ ನಿವಾಸಿಗಳಿಗೆ, ದಾರಿಹೋಕರಿಗೆ ಕಿರಿಕಿರಿಯಾಗುತ್ತಿದೆ. ಈ ಹಕ್ಕಿಗಳಿಂದ ಸ್ಥಳೀಯರ ಆರೋಗ್ಯಕ್ಕೆ ಅಪಾಯವಾಗುವ ಸಂಭವವೂ ಇದೆ. ಆದ್ದರಿಂದ ಈ ಹಕ್ಕಿಗಳಿಂದಾಗುತ್ತಿರುವ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ತಹಶೀಲ್ದಾರ, ಜಿಲ್ಲೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ನಗರ ಪಿಎಸಿಎಸ್ ಅಧ್ಯಕ್ಷ ಟಿ. ಬಸವರಾಜ್ ಹಾಗೂ ಮನವಿ ಸಲ್ಲಿಸಿದ್ದಾರೆ.